ಪಾಕಿಸ್ತಾನದಲ್ಲಿ ಸಾಮಾಜಿಕ ಜಾಲತಾಣಗಳಿಗೆ ತಾತ್ಕಾಲಿಕ ನಿಷೇಧ

Update: 2021-04-16 12:25 GMT

ಇಸ್ಲಾಮಾಬಾದ್: ತೆಹ್ರೀಕ್-ಇ-ಲಬ್ಬಾಯಿಕ್ ಪಾಕಿಸ್ತಾನ್ ಪಕ್ಷದ ಅಧ್ಯಕ್ಷ ಸಾದ್ ರಿಝ್ವಿ ಅವರ ಬಂಧನದ ಬಳಿಕ  ದೇಶದಲ್ಲಿ ಉದ್ಭವಿಸಿರುವ ಅಶಾಂತಿಯ ವಾತಾವರಣದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರಕಾರ  ಶುಕ್ರವಾರ ಬೆಳಿಗ್ಗೆ 11ರಿಂದ 3 ಗಂಟೆ ತನಕ  ದೇಶದಲ್ಲಿ ಎಲ್ಲಾ ಸಾಮಾಜಿಕ ಜಾಲತಾಣಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ. ಈ ಅವಧಿಯಲ್ಲಿ ಟ್ವಿಟ್ಟರ್, ಫೇಸ್ ಬುಕ್, ವಾಟ್ಸ್ಯಾಪ್, ಯುಟ್ಯೂಬ್ ಮತ್ತು ಟೆಲಿಗ್ರಾಂ ನಿಷೇಧಗೊಂಡಿವೆ.

ದೇಶದಲ್ಲಿನ ಫ್ರೆಂಚ್ ರಾಯಭಾರಿಯನ್ನು ಉಚ್ಛಾಟಿಸಬೇಕೆಂದು ಕರೆ ನೀಡಿದ ನಂತರ ರಿಝ್ವಿಯನ್ನು ಮಂಗಳವಾರ  ವಶಕ್ಕೆ ಪಡೆದುಕೊಂಡರುವುದನ್ನು ವಿರೋಧಿಸಿ ಸಾವಿರಾರು ತೆಹ್ರೀಕ್-ಇ-ಲಬ್ಬಾಯಿಕ್ ಪಾಕಿಸ್ತಾನ್ ಬೆಂಬಲಿಗರು ಬೀದಿಗಿಳಿದಿದ್ದಾರೆ.

ಪ್ರವಾದಿ ಮುಹಮ್ಮದ್ ಅವರ ವಿಡಂಬನಾತ್ಮಕ ಕಾರ್ಟೂನ್‍ಗಳನ್ನು ಪ್ರಕಟಿಸಿದ  ಮ್ಯಾಗಝಿನ್ ಚಾರ್ಲಿ ಹೆಬ್ಡೊ ಹಕ್ಕನ್ನು ಬೆಂಬಲಿಸಿ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್ ಅವರು ಹೇಳಿಕೆ ನೀಡಿದಂದಿನಿಂದ ಪಾಕಿಸ್ತಾನದಲ್ಲಿ ಫ್ರಾನ್ಸ್ ವಿರೋಧಿ ಭಾವನೆಗಳು ಹೆಚ್ಚಾಗಿವೆ.

ಪಾಕಿಸ್ತಾನದಲ್ಲಿರುವ ಫ್ರಾನ್ಸ್ ನಾಗರಿಕರನ್ನು ತಾತ್ಕಾಲಿಕವಾಗಿ ದೇಶ ಬಿಟ್ಟು ತೆರಳುವಂತೆ ಫ್ರೆಂಚ್ ರಾಯಭಾರ ಕಚೇರಿ ಗುರುವಾರ ಸೂಚಿಸಿದೆಯಲ್ಲದೆ ರಾಯಭಾರ ಕಚೇರಿ ಹೊರಗೆ ಸುರಕ್ಷಾ ಕ್ರಮಗಳನ್ನೂ ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News