ಉತ್ತರ ಪ್ರದೇಶದ ರುದ್ರಭೂಮಿಗಳಲ್ಲಿ ನಡೆಯುತ್ತಿದೆ ಕೋವಿಡ್‌ ನಿಂದ ಮೃತಪಟ್ಟವರ ಸರಣಿ ಅಂತ್ಯಕ್ರಿಯೆಗಳು!

Update: 2021-04-16 12:49 GMT
photo: theprint

ಲಕ್ನೋ: ಲಕ್ನೋ ನಗರದಲ್ಲಿ ಕೋವಿಡ್‍ನಿಂದ ಮೃತಪಟ್ಟವರ  ಅಂತ್ಯಕ್ರಿಯೆ ನಡೆಸಲು ಅನುಮತಿ ಪಡೆದಿರುವ ಮುಕ್ತಿ ಧಾಮ್ ಹಾಗೂ ಬೈಕುಂಠ್ ಧಾಮ್ ರುದ್ರಭೂಮಿಗಳಲ್ಲಿ ಕಳೆದ ಕೆಲ ದಿನಗಳಿಂದ ಹಲವಾರು ಕೋವಿಡ್ ರೋಗಿಗಳ  ಅಂತ್ಯಕ್ರಿಯೆ ನಡೆದಿದ್ದು, ರಾಜ್ಯ ಸರಕಾರದ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಕಳೆದ  24 ಗಂಟೆಗಳಲ್ಲಿ 104 ಕೋವಿಡ್ ಸಾವುಗಳು ಹಾಗೂ ಲಕ್ನೋದಲ್ಲಿ 26 ಸಾವುಗಳು ಸಂಭವಿಸಿವೆ ಎಂದು ತಿಳಿಸಿದೆ.

ಆದರೆ ಎಪ್ರಿಲ್ 15ರಂದು  ಮಾಧ್ಯಮ ಸಂಸ್ಥೆಗಳು ಸಂಗ್ರಹಿಸಿದ ಮಾಹಿತಿ ಮಾತ್ರ  ಇದಕ್ಕೆ ವ್ಯತಿರಿಕ್ತವಾಗಿದೆ. ಗುರುವಾರ ಸಂಜೆ 6 ಗಂಟೆಯ ತನಕ  ಮೇಲೆ ತಿಳಿಸಿದ ಎರಡೂ ರುದ್ರಭೂಮಿಗಳಲ್ಲಿ 108 ಕೋವಿಡ್ ಸೋಂಕಿತರ ಮೃತದೇಹಗಳ ಅಂತ್ಯಕ್ರಿಯೆ ನಡೆದಿದೆ. ಇವುಗಳ ಪೈಕಿ 80 ಅಂತ್ಯಕ್ರಿಯೆಗಳು ಬೈಕುಂಠ್ ಧಾಮ್‍ದಲ್ಲಿ ನಡೆದಿದ್ದರೆ ಇನ್ನುಳಿದ 28 ಅಂತ್ಯಕ್ರಿಯೆಗಳು ಮುಕ್ತಿ ಧಾಮ್‍ನಲ್ಲಿ ನಡೆದಿದೆ.

ಎಪ್ರಿಲ್ 14ರಂದು ಈ ಎರಡೂ ರುದ್ರಭೂಮಿಗಳಲ್ಲಿ ಒಟ್ಟು 101 ಮಂದಿಯ ಅಂತ್ಯಕ್ರಿಯೆ ನಡೆದಿದ್ದರೆ ಸರಕಾರದ ಅಂಕಿಅಂಶದ ಪ್ರಕಾರ ಕೇವಲ 14 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಅಂತೆಯೇ ಎಪ್ರಿಲ್ 13ರಂದು ಲಕ್ನೋದಲ್ಲಿ 84 ಕೋವಿಡ್ ಸೋಂಕಿತರ ಅಂತ್ಯಕ್ರಿಯೆ ನಡೆದಿದ್ದರೆ ಸರಕಾರದ ಅಂಕಿಅಂಶಗಳ ಪ್ರಕಾರ 18 ಮಂದಿ ಸಾವನ್ನಪ್ಪಿದ್ದಾರೆ.

ಇನ್ನೊಂದೆಡೆ ಲಕ್ನೋದ ಅತಿ ದೊಡ್ಡ ದಫನ ಭೂಮಿಯಾಗಿರುವ ಐಶ್‍ಬಾಗ್ ಖಬರಿಸ್ತಾನದಲ್ಲಿ ಎಪ್ರಿಲ್ 1ರಿಂದ 350ಕ್ಕೂ ಅಧಿಕ ಕಳೇಬರಗಳನ್ನು ದಫನ ಮಾಡಲಾಗಿದೆ. ಅಲ್ಲಿನ ಸಿಬ್ಬಂದಿಗಳ ಪ್ರಕಾರ ಕಳೆದೊಂದು ತಿಂಗಳಲ್ಲಿ ಇಲ್ಲಿ ನಡೆಯುವ ದಫನಗಳ ಸಂಖ್ಯೆ ಮೂರು ಪಟ್ಟು ಅಧಿಕವಾಗಿದೆ.

ಅಲ್ಲಿನ ಆಡಳಿತ ಮಂಡಳಿಯವರೊಬ್ಬರು ಮಾಹಿತಿ ನೀಡುತ್ತಾ ಎಪ್ರಿಲ್ 1ರಿಂದ 22 ಕೋವಿಡ್ ಸೋಂಕಿತರ ಮೃತದೇಹಗಳನ್ನು ದಫನ ಮಾಡಲಾಗಿದೆ ಆದರೆ  ಕಳೆದ ಕೆಲ ದಿನಗಳಿಂದ ಹೆಚ್ಚು ಸಂಖ್ಯೆಯ "ಕೋವಿಡ್‍ನಿಂದಲ್ಲದೆ ಇತರ ಕಾರಣಗಳಿಂದ ಮೃತಪಟ್ಟವರ ಕಳೇಬರಗಳನ್ನು ದಫನ ಮಾಡಲಾಗಿದೆ" ಎಂದು ಹೇಳುತ್ತಾರೆ.

ಆದರೆ ಈ ಕುರಿತು ಯಾವುದೇ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ.

ಕೋವಿಡ್ ಸೋಂಕಿತರ ಮೃತದೇಹಗಳ ಹೊರತಾಗಿ ಇತರ ಮೃತದೇಹಗಳ ಅಂತ್ಯಕ್ರಿಯೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ, ಘಾಟ್‍ಗಳಲ್ಲಿ ಪ್ರತಿ 10 ನಿಮಿಷಕ್ಕೊಂದು ಮೃತದೇಹ ತರಲಾಗುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

"ಮೃತಪಡುತ್ತಿರುವವರ ಸಂಖ್ಯೆ 25 ಪಟ್ಟು ಹೆಚ್ಚಾಗಿದೆ. ಹೆಚ್ಚಿನ ಮಂದಿಯ ಪರೀಕ್ಷೆ ನಡೆಸಲಾಗಿಲ್ಲ. ಹೆಚ್ಚಿನವರು ನ್ಯುಮೋನಿಯಾ ಸಮಸ್ಯೆಯಿಂದ ಬಳಲಿದ್ದಾರೆ. ಆದರೆ  ಸತ್ತವರು ಕೋವಿಡ್ ಸೋಂಕಿಗೆ ತುತ್ತಾಗಿದ್ದರೇ ಇಲ್ಲವೇ ಎಂಬುದು ತಿಳಿದಿಲ್ಲ" ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಸ್ಥಳೀಯ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News