ಬಂಗಾಳ ಚುನಾವಣೆ:ಚುನಾವಣಾ ಆಯೋಗದಿಂದ ಹೊಸ ನಿಯಮಾವಳಿ

Update: 2021-04-16 16:39 GMT

ಹೊಸದಿಲ್ಲಿ:  ಈಗಿರುವ ಕೋವಿಡ್ -19 ಪರಿಸ್ಥಿತಿಯನ್ನು ಗಮನಿಸಿ ಭಾರತದ ಚುನಾವಣಾ ಆಯೋಗವು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಉಳಿದ ಹಂತಗಳಲ್ಲಿ ಪ್ರಚಾರಕ್ಕಾಗಿ ಹೊಸ ನಿಯಮಾವಳಿಗಳನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ಹೊಸ ನಿಯಮಗಳ ಪ್ರಕಾರ, ಯಾವುದೇ ರಾಜಕೀಯ ಪಕ್ಷಕ್ಕೆ ಸಂಜೆ 7 ರಿಂದ ಬೆಳಿಗ್ಗೆ 10 ರವರೆಗೆ ಯಾವುದೇ ಚುನಾವಣಾ ರ‍್ಯಾಲಿ ನಡೆಸಲು ಅವಕಾಶವಿರುವುದಿಲ್ಲ. ಈ ನಿಯಮವನ್ನು ತಕ್ಷಣದಿಂದ ಜಾರಿಗೆ ತರಲಾಗುವುದು ಎಂದು ಚುನಾವಣಾ ಸಮಿತಿ ತಿಳಿಸಿದೆ.

ಚುನಾವಣಾ ಆಯೋಗವು ಮುಂಬರುವ ಹಂತಗಳ ಮೌನ ಅವಧಿಯನ್ನು 48 ಗಂಟೆಗಳಿಂದ 72 ಗಂಟೆಗಳವರೆಗೆ ಹೆಚ್ಚಿಸಿದೆ. ರಾಜಕೀಯ ಪಕ್ಷಗಳು ಮತದಾನದ ದಿನಕ್ಕಿಂತ ಮೊದಲು ಪ್ರಚಾರ ಮಾಡುವುದನ್ನು ನಿರ್ಬಂಧಿಸಿರುವ ಸಮಯವನ್ನು ಮೌನ ಅವಧಿ ಎಂದು ಕರೆಯಲಾಗುತ್ತದೆ.

ಎಪ್ರಿಲ್ 16 ರ ಸಂಜೆ 7 ರಿಂದ ಜಾರಿಗೆ ಬರುವಂತೆ ಸಂಜೆ 7 ರಿಂದ ಬೆಳಿಗ್ಗೆ 10 ರ ನಡುವಿನ ಪ್ರಚಾರದ ದಿನಗಳಲ್ಲಿ ಯಾವುದೇ ರ‍್ಯಾಲಿಗಳು, ಸಾರ್ವಜನಿಕ ಸಭೆಗಳು, ಬೀದಿ ನಾಟಕಗಳು, ಸಭೆಗಳಿಗೆ ಅನುಮತಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗದ ಆದೇಶದಲ್ಲಿ ತಿಳಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ 6, 7 ಮತ್ತು 8 ನೇ ಹಂತದ ಮತದಾನಕ್ಕೆ ಮೊದಲು ಮೌನ ಅವಧಿಯನ್ನು 72 ಗಂಟೆಗಳವರೆಗೆ ವಿಸ್ತರಿಸಲಾಗುವುದು ಎಂದು ಆಯೋಗ ಹೇಳಿದೆ. ಆ ಮೂಲಕ, ಈ ಹಂತಗಳಿಗಾಗಿ ಚುನಾವಣಾ ಪ್ರಚಾರ ಕಾರ್ಯವು ಎಪ್ರಿಲ್ 19, ಎಪ್ರಿಲ್ 23 ಹಾಗೂ ಎಪ್ರಿಲ್ 26 ರಂದು ಕ್ರಮವಾಗಿ ಸಂಜೆ 6.30 ಕ್ಕೆ ಕೊನೆಗೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News