ಎಜೆಎಲ್ ನಿವೇಶನ ಮರು ಮಂಜೂರು ಪ್ರಕರಣ: ಹೂಡಾ ವಿರುದ್ಧ ಆರೋಪ ರೂಪಿಸಿದ ಸಿಬಿಐ

Update: 2021-04-16 16:45 GMT

ಚಂಡಿಗಢ, ಎ. 16: ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ನಿವೇಶನ ಮರು ಮಂಜೂರು ಪ್ರಕರಣದಲ್ಲಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ವಿರುದ್ಧ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯ ಶುಕ್ರವಾರ ಆರೋಪ ರೂಪಿಸಿದೆ. ದೋಷಾರೋಪ ರೂಪಿಸುವ ಸಂದರ್ಭ ಹೂಡಾ ಅವರು ನ್ಯಾಯಾಲಯದಲ್ಲಿ ಹಾಜರಿದ್ದರು. ಪ್ರಕರಣದಿಂದ ಕೈಬಿಡುವಂತೆ ಕೋರಿ ಹೂಡಾ ಅವರು ಸಲ್ಲಿಸಿದ ಮನವಿಯ ಕುರಿತ ವಾದ ಮಂಡನೆ ಹಾಗೂ ಆರೋಪ ರಚನೆ ಗುರುವಾರ ನ್ಯಾಯಾಲಯದ ಮುಂದೆ ಪೂರ್ಣಗೊಂಡಿತು.

ಪ್ರಕರಣದಿಂದ ಕೈಬಿಡುವಂತೆ ಕೋರಿ ಹೂಡಾ ಅವರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಅಲ್ಲದೆ ಪ್ರಕರಣದ ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿತು. ಈ ಪ್ರಕರಣದಲ್ಲಿ ಹೂಡಾ ಹಾಗೂ ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ನಾಯಕ ಮೋತಿ ಲಾಲ್ ವೊಹ್ರಾ ಆರೋಪಿಗಳಾಗಿದ್ದಾರೆ. ಪಂಚಕುಲದಲ್ಲಿ ನಿವೇಶನ ಮರು ಮುಂಜೂರಿನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ನ ಆಗಿನ ಅಧ್ಯಕ್ಷರಾಗಿದ್ದ ವೊಹ್ರಾ ಹಾಗೂ ಹೂಡಾ ವಿರುದ್ಧ 2018 ಡಿಸೆಂಬರ್ನಲ್ಲಿ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು. ನಿವೇಶನಗಳ ಮರು ಮಂಜೂರಿನಿಂದ ಎಜೆಎಲ್ ಬೊಕ್ಕಸಕ್ಕೆ 67 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಸಿಬಿಐ ಆರೋಪ ಪಟ್ಟಿಯಲ್ಲಿ ಪ್ರತಿಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News