ಹೆಚ್ಚುತ್ತಿರುವ ಕೊರೋನ ಸೋಂಕು: ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್‌ಗಳ ಕೊರತೆ ಇಲ್ಲ; ದ.ಕ ಜಿಲ್ಲಾಡಳಿತ

Update: 2021-04-17 07:37 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಎ.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಎರಡನೆ ಅಲೆ ತೀವ್ರಗೊಳ್ಳುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿಯೂ ಏರಿಕೆ ಕಂಡು ಬರುತ್ತಿದೆ. ಗುರುವಾರದವರೆಗೆ 100ರಿಂದ 150ರ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ ಶುಕ್ರವಾರ 256ಕ್ಕೆ ಏರಿಕೆಯಾಗಿತ್ತು. ಆದರೆ ಸಾರ್ವಜನಿಕರು ಈ ಬಗ್ಗೆ ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿ ರೋಗಿಗಳಿಗೆ ಹಾಸಿಗೆಗಳು ಹಾಗೂ ವೆಂಟಿಲೇಟರ್‌ಗಳ ಕೊರತೆ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ 5355 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಜಿಲ್ಲೆಯಲ್ಲಿ ಶುಕ್ರವಾರದವರೆಗೆ ಒಟ್ಟು 1414 ಸಕ್ರಿಯ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಶೇ.90ರಷ್ಟು ಮಂದಿ ಹೋಂ ಐಸೋಲೇಶನ್‌ನಲ್ಲಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ನಿರಂತರ ನಿಗಾ ವಹಿಸಿದ್ದು, ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಇದ್ದ ಕೋವಿಡ್ ಕೇರ್ ಸೆಂಟರ್‌ಗಳನ್ನು ಮತ್ತೆ ಆರಂಭಿಸಲು ಚಿಂತನೆ ಮಾಡಲಾಗಿದೆ. ಮಂಗಳೂರಿನ ಎನ್‌ಐಟಿಕೆಯ ಒಂದು ಬ್ಲಾಕ್ ಹಾಗೂ ಕದ್ರಿ ಶಿವಭಾಗ್‌ನಲ್ಲಿರುವ ಇಎಸ್‌ಐ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ಯೋಚಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಜಿಲೆಯಲ್ಲಿ ಇದುವರೆಗೆ 6.80 ಲಕ್ಷ ಜನರ ಗಂಟಲು ದ್ರವ ತಪಾಸಣೆ ನಡೆಸಲಾಗಿದೆ. ಇದುವರೆಗೆ ಒಟ್ಟು 37562 ಮಂದಿಗೆ ಕೋವಿಡ್ ದೃಢವಾಗಿದ್ದು, 35405 ಮಂದಿ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಮಾಸ್ಕ್ ನಿಯಮ ಉಲ್ಲಂಘನೆಯ 45925 ಪ್ರಕರಣಗಳಲ್ಲಿ 47.69 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಮಾಸ್ಕ್ ಧಾರಣೆ, ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ಕೋವಿಡ್ ನಿಯಂತ್ರಣದಲ್ಲಿ ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News