ಮಂಗಳೂರು: ಮತ ಪ್ರವಚನ ನೀಡಲು ಬಂದಿದ್ದ ವಿದ್ಯಾರ್ಥಿ ಮಸೀದಿಯಲ್ಲಿ ಮೃತ್ಯು

Update: 2021-04-17 08:01 GMT

ಮಂಗಳೂರು, ಎ.17: ರಮಝಾನ್‌ನ ಮತ ಪ್ರವಚನ ನೀಡಲು ಬಂದಿದ್ದ ವಿದ್ಯಾರ್ಥಿಯೊಬ್ಬ ಮಸೀದಿಯಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಗರದ ಹೊರವಲಯದ ಮರಕಡದಲ್ಲಿ ನಡೆದಿದೆ.

ಸುಳ್ಯ ಸಮೀಪದ ಅಜ್ಜಾವರದ ಹಸೈನಾರ್ ಹಾಜಿ-ಝಹುರಾ ದಂಪತಿಯ ಪುತ್ರ ಅಬ್ದುಲ್ ಅಲ್ ಸಿನಾನ್ ಅಜ್ಜಾವರ (20) ಮೃತಪಟ್ಟ ಯುವಕ.
ಸಾಮಾನ್ಯವಾಗಿ ದರ್ಸ್ ವಿದ್ಯಾರ್ಥಿಗಳು ರಮಝಾನ್‌ನಲ್ಲಿ ಮತ ಪ್ರವಚನದ ತರಬೇತಿ ಪಡೆಯಲು ಮಸೀದಿಗಳಿಗೆ ತೆರಳುವುದು ವಾಡಿಕೆ. ಅದರಂತೆ ಸಿನಾನ್ ಕೂಡ ಶುಕ್ರವಾರ ಮುಸ್ಸಂಜೆ ನಗರ ಹೊರವಲಯದ ಮರಕಡದ ಜುಮಾ ಮಸೀದಿಗೆ ತೆರಳಿದ್ದರು. ಉಪವಾಸ ವೃತ ತೊರೆದು, ತರಾವೀಹ್ ನಮಾಜ್ ಮುಗಿಸಿ ಮತ ಪ್ರವಚನವನ್ನೂ ನೀಡಿದ್ದರು.

ಇಂದು ಬೆಳಗ್ಗೆ ಸಹರಿಗೆ ಎದ್ದು ಊಟ ಮಾಡಿದ ಬಳಿಕ ಊಟದ ತಟ್ಟೆ ತೊಳೆಯುತ್ತಿದ್ದಾಗ ಸಿನಾನ್ ಕುಸಿದು ಬಿದ್ದಿದ್ದರು. ಮರಕಡ ಜುಮಾ ಮಸೀದಿಯ ಖತೀಬ್ ಇಸಾಕ್ ಸಖಾಫಿ ಕೂಡ ಸಿನಾನ್‌ನ ಸಂಬಂಧಿಯಾಗಿದ್ದು, ಈತನಿಗೆ ಅಪಸ್ಮಾರ ರೋಗವಿರುವ ಬಗ್ಗೆ ತಿಳಿದಿದ್ದ ಅವರು ತಕ್ಷಣ ಮನೆಯವರಿಗೆ ಮಾಹಿತಿ ನೀಡಿದ್ದರು. ಮನೆಯವರ ಸೂಚನೆಯ ಮೇರೆಗೆ ಕುಸಿದು ಬಿದ್ದಿದ್ದ ಸಿನಾನ್‌ನನ್ನು ಅಲ್ಲೇ ಮಲಗಲು ವ್ಯವಸ್ಥೆ ಕಲ್ಪಿಸಿದ್ದರು. ಆದರೆ 8 ಗಂಟೆಯಾದರೂ ಎದ್ದೇಳದ ಕಾರಣ ಮನೆಯವರ ಗಮನಕ್ಕೆ ತರಲಾಯಿತು. ಮತ್ತೆ ಅವರ ಸೂಚನೆಯ ಮೇರೆಗೆ ಇಸಾಕ್ ಸಖಾಫಿಯವರು ಸಿನಾನ್‌ನನ್ನು ಎಬ್ಬಿಸಲು ಪ್ರಯತ್ನಿಸಿದರು. ಆದರೆ ಸಿನಾನ್ ಮಲಗಿದಲ್ಲೇ ಮೃತಪಟ್ಟಿದ್ದರು.

ಕುಂಬ್ರ ಕೆಐಸಿ ವಾಫಿ (ಸನದು) ದ್ವಿತೀಯ ತರಗತಿಯ ವಿದ್ಯಾರ್ಥಿಯಾಗಿದ್ದ ಈತ ಬಿಕಾಂ ಕಲಿಯುತ್ತಿದ್ದರು. ಓದುವ ಹವ್ಯಾಸದೊಂದಿಗೆ ಪ್ರತಿಭಾವಂತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪ್ರಚಲಿತ ವಿದ್ಯಮಾನದ ಬಗ್ಗೆ ಸಹಪಾಠಿಗಳ ಜೊತೆ ಚರ್ಚೆ ನಡೆಸುತ್ತಿದ್ದರು.

ಹಸೈನಾರ್ ಹಾಜಿ-ಝಹುರಾ ದಂಪತಿಯ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯ ಸಹಿತ ಮೂವರು ಮಕ್ಕಳಲ್ಲಿ ಸಿನಾನ್ ಹಿರಿಯ ಮಗನಾಗಿದ್ದ.

ಸಂತಾಪ: ವಿದ್ಯಾರ್ಥಿಯ ನಿಧನಕ್ಕೆ ಎಸ್ಕೆಎಸೆಸ್ಸೆಫ್ ಜಿಲ್ಲಾಧ್ಯಕ್ಷ ಅಮೀರ್ ತಂಙಳ್ ಕಿನ್ಯ, ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ತಿಂಗಳಾಡಿ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News