ಅರಬಿ ಸಮುದ್ರದಲ್ಲಿ ಬೋಟ್ ದುರಂತ: 6 ಮಂದಿಯ ಪತ್ತೆಗಾಗಿ ಮುಂದುವರಿದ ಶೋಧ

Update: 2021-04-17 12:09 GMT

ಮಂಗಳೂರು, ಎ.17: ಸುರತ್ಕಲ್ ಲೈಟ್‌ಹೌಸ್‌ನಿಂದ ಸುಮಾರು 42 ನಾಟಿಕಲ್ ಮೈಲ್ ದೂರದ ಅರಬಿ ಸಮುದ್ರದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಬೋಟ್ ದುರಂತದಲ್ಲಿ ಇನ್ನೂ ನಾಪತ್ತೆಯಾಗಿರುವ 6 ಮಂದಿಗಾಗಿ ಶನಿವಾರವೂ ಶೋಧ ಮುಂದುವರಿದಿದೆ.

ಕಾಣೆಯಾದ ಒಂಭತ್ತು ಮೀನುಗಾರರ ಪೈಕಿ ಮೂವರು ಮೀನುಗಾರರ ಮೃತದೇಹವು ಶುಕ್ರವಾರ ಪತ್ತೆಯಾಗಿತ್ತು. ಆ ಪೈಕಿ ತಮಿಳ್ನಾಡಿನ ಪಳನಿಸ್ವಾಮಿ ಎಂಬವರ ಮೃತದೇಹದ ಗುರುತು ಪತ್ತೆಯಾಗಿದೆ. ಉಳಿದ ಇಬ್ಬರ ಮೃತದೇಹದ ಗುರುತು ಪತ್ತೆಗಾಗಿ ವಾರಸುದಾರರು ಪ್ರಯತ್ನಿಸುತ್ತಿದ್ದಾರೆ.

ಇನ್ನುಳಿದ 6 ಮಂದಿಯ ಪತ್ತೆಗಾಗಿ ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪೊಲೀಸ್ ಪಡೆಯು ದುರ್ಘಟನೆ ನಡೆದ ಐದನೆಯ ದಿನವಾದ ಶನಿವಾರವೂ ಕರಾವಳಿ ಕಾವಲು ಪೊಲೀಸ್ ಪಡೆ ಸಹಿತ ಕೋಸ್ಟ್‌ಗಾರ್ಡ್, ಕಾರವಾರದ ನೌಕನೆಲೆಯ ಹಡಗು, ಹೆಲಿಕಾಪ್ಟರ್ ಮೂಲಕ ತೀವ್ರ ಶೋಧ ಕಾರ್ಯಾಚರಣೆ ನಡೆಸಿದೆ.

ಶುಕ್ರವಾರ ಮುಸ್ಸಂಜೆ ‘ಐಎನ್‌ಎಸ್ ನಿರ್ದೇಶಕ್’ ಎಂಬ ಹಡಗಿನಲ್ಲಿ ಕಾರ್ಯಾಚರಣೆ ಮಾಡುವಾಗ ದೊರೆತ ಮೂರು ಮೃತದೇಹಗಳನ್ನು ಶುಕ್ರವಾರ ತಡರಾತ್ರಿ ಮಂಗಳೂರಿಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಗುರುತು ಪತ್ತೆಯಾದ ಪಳನಿಸ್ವಾಮಿಯ ಮೃತದೇಹವನ್ನು ಶನಿವಾರ ವಾರಸುದಾರರಿಗೆ ಹಸ್ತಾಂತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News