ಕೊರೋನ ನಿಯಂತ್ರಣಕ್ಕೆ ಪೊಲೀಸ್ ಠಾಣೆಯ ದಿಟ್ಟ ಹೆಜ್ಜೆ

Update: 2021-04-17 13:02 GMT

ಮಂಗಳೂರು, ಎ.17: ಕೊರೋನ ಎರಡನೆ ಅಲೆಯ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ನಗರದ ಉರ್ವಾ ಪೊಲೀಸ್ ಠಾಣೆ ವಿನೂತನ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ.

ಕೊರೋನ ಪ್ರಥಮ ಅಲೆಯ ಸಂದರ್ಭ ಕೊರೋನ ವಾರಿಯಾರ್ಸ್‌ಗಳಾದ ವೈದ್ಯರು ಮತ್ತು ಪೊಲೀಸರನ್ನು ಕೋವಿಡ್ ಅತಿಯಾಗಿ ಕಾಡಿತ್ತು. ಈ ನೆಲೆಯಲ್ಲಿ ಪೊಲೀಸ್ ಇಲಾಖೆಗಳಲ್ಲೂ ಜಾಗೃತಿ ಕಾರ್ಯ ನಡೆಯುತ್ತಿದೆ. ಮಂಗಳೂರಿನ ಉರ್ವ ಪೊಲೀಸ್ ಠಾಣೆಯೂ ಕೊರೋನ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಿಬ್ಬಂದಿಗಳ ಆರೋಗ್ಯದತ್ತ ಹೆಚ್ಚಿನ ನಿಗಾ ವಹಿಸಿದೆ.

ಕೊರೋನ ಜಾಗೃತಿಯ ಭಾಗವಾಗಿ ಠಾಣೆಯ ಮುಂಭಾಗ ಪ್ರತ್ಯೇಕ ಕೇಂದ್ರವನ್ನು ತೆರೆಯಲಾಗಿದ್ದು, ಠಾಣೆಗೆ ಬರುವ ಪ್ರತಿಯೊಬ್ಬ ಸಿಬ್ಬಂದಿಗಳು, ನಾಗರಿಕರು ಈ ಕೇಂದ್ರಕ್ಕೆ ಬಂದು ತಪಾಸಣೆ ಮಾಡಿಯೇ ತೆರಳುವಂತೆ ವ್ಯವಸ್ಥೆ ಮಾಡಲಾಗಿದೆ. 

ಠಾಣೆಯಲ್ಲಿದೆ ಕಷಾಯ!
ಆರೋಗ್ಯದ ಹಿತದೃಷ್ಟಿಯಿಂದ ಉರ್ವ ಪೊಲೀಸ್ ಠಾಣೆಯಲ್ಲಿ ಕಷಾಯವೂ ಲಭ್ಯವಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯವನ್ನು ಇಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ನೀಡಲಾಗುತ್ತದೆ. ಅಲ್ಲದೆ ಠಾಣೆಗೆ ಸಮಸ್ಯೆ ಹೇಳಿಕೊಂಡು ಬರುವ ಸಾರ್ವಜನಿಕರೂ ಕೂಡ ಕಷಾಯ ಬಯಸಿದರೆ ನೀಡುವ ವ್ಯವಸ್ಥೆ ಮಾಡಲಾಗಿದೆ.

ಕಳೆದ ಬಾರಿ ಹಲವು ಮಂದಿ ಪೊಲೀಸರಿಗೆ ಕೊರೋನ ಸೋಂಕು ತಗುಲಿತ್ತು. ಕೊರೋನ ವಾರಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಪೊಲೀಸರ ಆರೋಗ್ಯದ ಹಿತದೃಷ್ಟಿಯಿಂದ ಈ ಮಾದರಿ ಕೇಂದ್ರವನ್ನು ತೆರೆಯಲಾಗಿದೆ. ಪ್ರತಿಯೊಬ್ಬರೂ ಕೋವಿಡ್ ಕುರಿತು ಎಚ್ಚರಿಕೆ ವಹಿಸಬೇಕಾದ್ದು, ಅತ್ಯವಶ್ಯಕ. ಸಾರ್ವಜನಿಕರು ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಅನವಶ್ಯಕವಾಗಿ ಯಾರೂ ಕೂಡ ತಿರುಗಾಡಬಾರದು. ಕೊರೋನ ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.

ಉರ್ವ ಪೊಲೀಸ್ ಠಾಣೆಯನನು ಕೋವಿಡ್ ಮುಂಜಾಗೃತೆಯ ನೆಲೆಯಲ್ಲಿ ಮಾದರಿ ಠಾಣೆಯಾಗಿ ಮಾಡಲಾಗಿದ್ದು, ಮುಂದೆ ಇತರ ಠಾಣೆಗಳಲ್ಲೂ ಅಳವಡಿಸುವತ್ತ ಗಮನ ಹರಿಸಲಾಗಿದೆ.
-ಎನ್. ಶಶಿಕುಮಾರ್, ಕಮಿಷನರ್, ಮಂಗಳೂರು ಪೊಲೀಸ್ ಕಮಿಷನರೇಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News