ಶಿರ್ವ: ವಿದ್ಯಾರ್ಥಿಗಳಿಂದ ಕೋವಿಡ್ ವಿರುದ್ಧದ ಲಸಿಕಾ ಅಭಿಯಾನ

Update: 2021-04-17 13:51 GMT

ಶಿರ್ವ, ಎ.17: ಬಂಟಕಲ್ ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋವಿಡ್ ವಿರುದ್ಧದ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡರು.

ಸಂಸ್ಥೆಯ ವಿದ್ಯಾರ್ಥಿಗಳು ಬಂಟಕಲ್ ಕಾಲೇಜಿನ ಆಸುಪಾಸು ಹಾಗೂ ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ, ಅಲ್ಲಿ 45ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ತೆಗೆದುಕೊಳ್ಳುವುದರಿಂದ ಆಗುವ ಉಪಯೋಗಗಳನ್ನು ವಿವರಿಸಿದರು. ಈ ಮೂಲಕ ಅವರಲ್ಲಿ ಜಾಗೃತಿಯನ್ನು ಮೂಡಿಸಿ ಲಸಿಕೆ ಪಡೆಯಲು ಇರುವ ಹಿಂಜರಿಕೆ ದೂರ ಮಾಡಿ, ಹೆಚ್ಚು ಮಂದಿ ಲಸಿಕೆ ಹಾಕುವಂತೆ ಉತ್ತೇಜಿಸಿದರು.

ಕೇಂದ್ರ, ರಾಜ್ಯ ಸರಕಾರ ಹಾಗೂ ವಿಶ್ವವಿದ್ಯಾನಿಲಯದ ಮಾರ್ಗದರ್ಶನ ದಂತೆ ಈ ಅಭಿಯಾನವನ್ನು ಜ್ಯೋತಿಭಾ ಪುಲೆ ಅವರ ಜನ್ಮದಿನವಾದ ಎ. 1ರಂದು ಪ್ರಾರಂಭಿಸಿ ಡಾ.ಅಂಬೇಡ್ಕರ್ ಜನ್ಮದಿನವಾದ ಎ.14ರವರೆಗೆ ಕೈಗೊಳ್ಳಲಾಯಿತು. ರಾಷ್ಟ್ರೀಯ ಸೇವಾ ಘಟಕದ ಮುಖ್ಯಸ್ಥ ನಾಗರಾಜ್ ರಾವ್ ಅಭಿಯಾನವನ್ನು ಆಯೋಜಿಸಿದ್ದರು. ಕಾಲೇಜಿನ ಪ್ರಾಧ್ಯಾಪಕರುಗಳಾದ ಗಣೇಶ್ ಶೆಟ್ಟಿ, ರಮ್ಯಶ್ರಿ, ಮಧುಕರ್ ನಾಯಕ್, ನಿಶಾ ರೀನ ನಜರ್, ಮಧುಸೂನ ರಾವ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News