ಬಿಜೆಪಿ ಸರಕಾರ ಬಡವರ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದೆ : ಅಶೋಕ್ ಕುಮಾರ್ ಕೊಡವೂರು

Update: 2021-04-17 14:07 GMT

ಉಡುಪಿ, ಎ.17: ರಾಜ್ಯದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಈ ಹಿಂದಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜಾರಿಗೆ ತಂದ ಅನ್ನ ಭಾಗ್ಯ, ಇಂದಿರಾ ಕ್ಯಾಂಟಿನ್, ಬಿಸಿಯೂಟ ಮೊದಲಾದ ಜನಪರ ಯೋಜನೆಗಳನ್ನು ಹಂತ ಹಂತವಾಗಿ ಮುಚ್ಚುವ ವ್ಯವಸ್ಥಿತ ಹುನ್ನಾರದೊಂದಿಗೆ ಬಡವರ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಿಷಾದ ವ್ಯಕ್ತಪಡಿಸಿದೆ.

ಕಳೆದ ಬಜೆಟಿನಲ್ಲಿ ಇಂದಿರಾ ಕ್ಯಾಂಟಿನಿಗೆ ಹಣ ಮೀಸಲಿಡದೆ ಯೋಜನೆಯ ದೈನಂದಿನ ಫಲಾನುಭವಿಗಳನ್ನು ರಾಜ್ಯ ಸರಕಾರ ವಂಚಿಸಿದೆ. ಸರಕಾರದ ಅನುದಾನದ ಕೊರತೆಯಿಂದಾಗಿ ಕಂಟ್ರಾಕ್ಟುದಾರರು ರಾಜ್ಯಾದ್ಯಂತ ಹೆಚ್ಚಿನ ನಗರಗಳಲ್ಲಿ ಈ ಕ್ಯಾಂಟೀನುಗಳನ್ನು ಮುಚ್ಚುತ್ತಿದ್ದಾರೆ. ಪರಿಣಾಮವಾಗಿ ಇದನ್ನೇ ನಂಬಿ ದಿನಾ 5-10 ರೂಪಾಯಿಗಳಲ್ಲಿ ಹೊಟ್ಟೆ ತುಂಬಿಸಿಕೊಂಡು ದುಡಿಮೆಯಲ್ಲಿ ತೊಡಗುತ್ತಿದ್ದ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು, ನಿರ್ವಸಿತರೇ ಮೊದಲಾದ ಕನಿಷ್ಠ ಆದಾಯದ ಶ್ರಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಸರಕಾರದ ದಿವ್ಯ ಮೌನ ಈ ಯೋಜನೆಯನ್ನೇ ಮುಚ್ಚುವ ಸರಕಾರದ ಗುಪ್ತ ಕಾರ್ಯಸೂಚಿಗೆ ಸಾಕ್ಷ ನೀಡುತ್ತಿದೆ ಎಂದು ಹೇಳಿದೆ.
ರಾಜ್ಯದ 1.22 ಕೋಟಿ ಕುಟುಂಬಗಳಿಗೆ ಬಿಪಿಎಲ್ ಮತ್ತು ಅಂತ್ಯೋದಯ ಉಚಿತ ಅಕ್ಕಿ ಒದಗಿಸುತ್ತಿದ್ದ ಅನ್ನಭಾಗ್ಯ ಯೋಜನೆಯನ್ನೂ ಈ ಸರಕಾರ ಕೊರೋನಾ ಆರ್ಥಿಕ ಸಂಕಷ್ಟದ ನೆಪವೊಡ್ಡಿ, ಕುಟುಂಬದ ಸದಸ್ಯನೊಬ್ಬನಿಗೆ 7 ಕೆ.ಜಿ.ಯಂತೆ ಕೊಡುತ್ತಿದ್ದ ಅಕ್ಕಿ ಯನ್ನು ಈಗಾಗಲೇ 5 ಕೆ.ಜಿ.ಗೆ ಇಳಿಸಲಾಗಿದೆ. ಇದೀಗ ಅದನ್ನು 2 ಕೆ.ಜಿ ಅಕ್ಕಿ ಮತ್ತು ರಾಗಿ, ಗೋಧಿಗೆ ಸೀಮಿತಗೊಳಿಸಲಾಗಿದೆ.
ಮುಂದಿನ ಹಂತದಲ್ಲಿ ಸರಕಾರದ ಖಜಾನೆಗೆ ನಷ್ಟದ ಕಾರಣ ಮುಂದಿಟ್ಟು ಈ ಅನ್ನಭಾಗ್ಯ ಯೋಜನೆಯನ್ನೇ ರದ್ದು ಮಾಡುವ ಬಗ್ಗೆ ಉನ್ನತ ಮಟ್ಟದ ವ್ಯವಸ್ಥಿತ ಪಿತೂರಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇದರ ವಿರುದ್ದ ಬಡ ಜನರ ಧ್ವನಿಯಾಗಿ ಹೋರಾಡಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News