ಹೊಸ ಕೋವಿಡ್-19 ಪ್ರಕರಣಗಳಲ್ಲಿ 10 ರಾಜ್ಯಗಳ ಪಾಲು ಶೇ.80:ಕೇಂದ್ರ

Update: 2021-04-17 14:42 GMT

ಹೊಸದಿಲ್ಲಿ,ಎ.17: ಮಹಾರಾಷ್ಟ್ರ,ಉತ್ತರ ಪ್ರದೇಶ,ದಿಲ್ಲಿ ಮತ್ತು ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಶೇ.80ರಷ್ಟು ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ ತಿಳಿಸಿದೆ.

ಶನಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಗರಿಷ್ಠ ಸಂಖ್ಯೆಯಲ್ಲಿ,63,729 ಹೊಸ ದೈನಂದಿನ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ (27,360) ಮತ್ತು ದಿಲ್ಲಿ (19,486) ಇವೆ.
ಮಹಾರಾಷ್ಟ್ರ,ಉತ್ತರ ಪ್ರದೇಶ, ದಿಲ್ಲಿ, ಛತ್ತೀಸ್ಗಡ, ಕರ್ನಾಟಕ, ಮಧ್ಯಪ್ರದೇಶ, ಕೇರಳ, ಗುಜರಾತ್,‌ ತಮಿಳುನಾಡು ಮತ್ತು ರಾಜಸ್ಥಾನ ಈ 10 ರಾಜ್ಯಗಳಲ್ಲಿ ಶೇ.79.32ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರ,ಛತ್ತೀಸ್ಗಡ,ಉತ್ತರ ಪ್ರದೇಶ, ಕರ್ನಾಟಕ, ಹರ್ಯಾಣ, ರಾಜಸ್ಥಾನ, ಪಂಜಾಬ್, ಕೇರಳ,‌ ದಿಲ್ಲಿ, ತಮಿಳುನಾಡು, ಮಧ್ಯಪ್ರದೇಶ, ಗುಜರಾತ್,‌ ತೆಲಂಗಾಣ, ಉತ್ತರಾಖಂಡ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಈ 16 ರಾಜ್ಯಗಳಲ್ಲಿ ದೈನಂದಿನ ಹೊಸ ಕೋವಿಡ್-19 ಪ್ರಕರಣಗಳು ಏರುಗತಿಯಲ್ಲಿವೆ ಎಂದು ಸಚಿವಾಲಯವು ತಿಳಿಸಿದೆ.
ದೇಶದಲ್ಲಿಯ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಮಹಾರಾಷ್ಟ್ರ, ಛತ್ತೀಸ್ಗಡ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಕೇರಳ ಈ ಐದು ರಾಜ್ಯಗಳ ಪಾಲು ಶೇ.65.02ರಷ್ಟಿದ್ದು, ಮಹಾರಾಷ್ಟ್ರವೊಂದೇ ಶೇ.38.09ರಷ್ಟು ಸಕ್ರಿಯ ಪ್ರಕರಣಗಳನ್ನು ಹೊಂದಿದೆ.

ತನ್ಮಧ್ಯೆ ದೇಶದಲ್ಲಿ ನೀಡಲಾಗಿರುವ ಒಟ್ಟು ಲಸಿಕೆ ಡೋಸ್ಗಳ ಸಂಖ್ಯೆ ಶನಿವಾರ ಬೆಳಿಗ್ಗೆ ಏಳು ಗಂಟೆಯ ವರದಿಯಂತೆ 12 ಕೋಟಿಯ ಸಮೀಪಕ್ಕೆ ತಲುಪಿದೆ. ಫಲಾನುಭವಿಗಳಲ್ಲಿ ಮೊದಲ ಡೋಸ್ ಪಡೆದಿರುವ 91,05,429 ಮತ್ತು ಎರಡನೇ ಡೋಸ್ ಪಡೆದಿರುವ 56,70,818 ಆರೋಗ್ಯ ಕಾರ್ಯಕರ್ತರು,ಮೊದಲ ಡೋಸ್ ಪಡೆದಿರುವ 1,11,44,069 ಮತ್ತು ಎರಡನೇ ಡೋಸ್ ಪಡೆದಿರುವ 54,08,572 ಮುಂಚೂಣಿ ಕಾರ್ಯಕರ್ತರು, 4,49,35,011 (ಮೊದಲ ಡೋಸ್) ಮತ್ತು 34,88,257 (ಎರಡನೇ ಡೋಸ್) 60 ವರ್ಷ ಮೇಲ್ಪಟ್ಟವರು ಹಾಗೂ 3,92,23,975 (ಮೊದಲ ಡೋಸ್) ಮತ್ತು 9,61,510 (ಎರಡನೇ ಡೋಸ್) 45ರಿಂದ 60 ವರ್ಷ ವಯೋಮಾನದವರು ಸೇರಿದ್ದಾರೆ ಎಂದು ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News