ಕೊರೋನ ಸೋಂಕಿತರ ಪ್ರಕರಣ ಹೆಚ್ಚಳ: ವೆನ್ಲಾಕ್ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಡಿಸಿ ಸಭೆ

Update: 2021-04-17 16:19 GMT

ಮಂಗಳೂರು,ಎ.17: ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕಿತರು ಅಧಿಕ ಸಂಖ್ಯೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಸಾಧ್ಯತೆಗಳಿರುವುದರಿಂದ ಚಿಕಿತ್ಸೆ ನೀಡಲು ಅಗತ್ಯ ಮೂಲಭೂತ ಸೌಕರ್ಯಗಳನ್ನೊಳಗೊಂಡ ಬೆಡ್‌ಗಳ ವ್ಯವಸ್ಥೆಯನ್ನು ಮಾಡುವುದರೊಂದಿಗೆ ಉತ್ತಮ ಚಿಕಿತ್ಸೆ ನೀಡಲು ಮುಂದಾಗಬೇಕೆಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಅವರು ಕೋವಿಡ್ ಚಿಕಿತ್ಸೆಗೆ ಹೆಚ್ಚುವರಿ ಬೆಡ್ಗಳ ವ್ಯವಸ್ಥೆ ಮಾಡುವ ಕುರಿತು ಪರಿಶೀಲಿಸಿದ ನಂತರ ಆರೋಗ್ಯ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿದರು.

ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಅವರಿಗೆ ಚಿಕಿತ್ಸೆ ನೀಡಲು ತಜ್ಞ ವೈದ್ಯರುಗಳು ಹಾಗೂ ಶುಶ್ರೂಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡಲು ಕೊರತೆ ಉಂಟಾಗಬಾರದು ಎಂದು ಹೇಳಿದರು.

ಕೆಎಂಸಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಸೇವೆಗೆ ನಿಯೋಜಿಸುವುದರಿಂದ ಅಗತ್ಯ ಚಿಕಿತ್ಸೆಗಳನ್ನು ನೀಡಲು ಸಹಕಾರಿಯಾಗುತ್ತದೆ. ಸಾಮಾನ್ಯ ರೋಗ ಲಕ್ಷಣಗಳಿರುವ ವ್ಯಕ್ತಿಗಳನ್ನು ನಗರದ ಕದ್ರಿಯಲ್ಲಿರುವ ಇಎಸ್‌ಐ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಔಷಧ, ಬೆಡ್ ಸಹಿತ ಎಲ್ಲಾ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು. ಯಾವುದೇ ಸೌಲಭ್ಯದಲ್ಲೂ ಕೊರೆತಯಾಗಬಾರದು. ಎಲ್ಲಾ ಸುರಕ್ಷಾ ಸಾಧನಗಳು ಹಾಗೂ ಪರಿಕರಗಳನ್ನು ಮುಂದಿನ 15 ರಿಂದ 20 ದಿನಗಳಿಗೆ ಆಗುವಂತೆ ದಾಸ್ತಾನು ಇಟ್ಟಕೊಳ್ಳಬೇಕು ಎಂದರು.

ಈ ಸಂದರ್ಭ ಜಿಪಂ ಸಿಇಒ ಡಾ. ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಸರ್ವೇಕ್ಷಣಾಧೀಕಾರಿ ಡಾ. ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸದಾಶಿವ ಶಾನುಭೋಗ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News