ಉಪ್ಪಿನಂಗಡಿ: ಹಾವು ಕಡಿತಕ್ಕೊಳಗಾಗಿ ಯುವಕ ಮೃತ್ಯು

Update: 2021-04-17 16:36 GMT
ಎಂ.ಆರ್. ಮುಹಮ್ಮದ್ ಮುಸ್ತಾಫ

ಉಪ್ಪಿನಂಗಡಿ: ನಾಡಿಗೆ ಬಂದ ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ರಕ್ಷಿಸುತ್ತಿದ್ದ 34 ನೆಕ್ಕಿಲಾಡಿ ನಿವಾಸಿ 'ಸ್ನೇಕ್ ಮುಸ್ತಾ' ಎಂದೇ ಚಿರಪರಿಚಿತರಾಗಿದ್ದ ಎಂ.ಆರ್. ಮುಹಮ್ಮದ್ ಮುಸ್ತಾಫ ಶನಿವಾರ ನಾಗರಹಾವಿನ ಕಡಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

34 ನೆಕ್ಕಿಲಾಡಿ ಬೊಳಂತಿಲ ಹೊಸ ಕಾಲನಿ ನಿವಾಸಿ ಎಂ.ಆರ್. ಮುಸ್ತಾಫ ವೃತ್ತಿಯಲ್ಲಿ  ಅಟೋ ರಿಕ್ಷಾ ಚಾಲಕರಾಗಿದ್ದ ಇವರು ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು. ಶನಿವಾರ ಸಂಜೆ ಬೆಳ್ತಂಗಡಿ ತಾಲೂಕಿನ ನೇಜಿಕಾರಿನಲ್ಲಿ ಮನೆಯೊಂದಕ್ಕೆ ನಾಗರಹಾವು ಬಂತೆಂದು ಇವರಿಗೆ ಕರೆ ಬಂದಿದ್ದು, ಅದನ್ನು ಹಿಡಿದು ರಕ್ಷಿಸಲು ಅಲ್ಲಿಗೆ ತೆರಳಿದ್ದರು. ಹಾವು ಹಿಡಿಯುತ್ತಿದ್ದ ಸಂದರ್ಭ ಇವರಿಗೆ ಹಾವು ಕಚ್ಚಿದ್ದು, ತೀವ್ರ ಅಸ್ವಸ್ಥಗೊಂಡ ಇವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಇವರು ಮೃತಪಟ್ಟರು.

ಮುಹಮ್ಮದ್ ಮುಸ್ತಾಫ ಅವರು ಪ್ರಾಣಿ ಪ್ರಿಯರಾಗಿದ್ದು, ಮನೆಯಲ್ಲಿ ಪಾರಿವಾಳ, ಆಡು, ಕೋಳಿ ಹೀಗೆ ಸಾಕು ಪ್ರಾಣಿಗಳನ್ನು ಸಾಕಿಕೊಂಡಿರುತ್ತಿದ್ದರಲ್ಲದೆ, ಹಾವು ಹಿಡಿಯುವಲ್ಲಿ ನಿಪುಣತೆಯನ್ನು ಪಡೆದಿದ್ದರು. ವಿಷಕಾರಿ ಹಾವುಗಳನ್ನು ಯಾವುದೇ ಸಲಕರಣೆಗಳನ್ನು ಬಳಸದೇ ಬರಿಗೈಯಲ್ಲೇ ಹಿಡಿದು ದೂರದ ಕಾಡಿಗೆ ಬಿಡುತ್ತಿದ್ದರು. ಇವರು ಸುಮಾರು 1000ಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದು, ಇದಕ್ಕಾಗಿ ಹಲವು ಸಂಘ- ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ.

ಮೃತರು ಪತ್ನಿ ಹಾಗೂ ನಾಲ್ಕು ಹಾಗೂ ಎರಡು ವರ್ಷದ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News