​ರೇವ್‌ಪಾರ್ಟಿ ಪ್ರಕರಣ: ಮಹಿಳಾ ಹೆಡ್‌ಕಾನ್‌ಸ್ಟೆಬಲ್ ಅಮಾನತು

Update: 2021-04-17 16:42 GMT

ಮಂಗಳೂರು, ಎ.17: ಹಾಸನ ಜಿಲ್ಲೆಯ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಗರವಳ್ಳಿ ಎಂಬಲ್ಲಿ ಎ.10ರಂದು ರಾತ್ರಿ ನಡೆದ ರೇವ್‌ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮಂಗಳೂರಿನ ಇಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಂ ಠಾಣೆಯ ಮಹಿಳಾ ಹೆಡ್‌ಕಾನ್‌ಸ್ಟೆಬಲ್ ಶ್ರೀಲತಾ ಅವರನ್ನು ಅಮಾನತು ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಪಾರ್ಟಿ ನಡೆಯುವ ವೇಳೆ ಶ್ರೀಲತಾ ಸ್ಥಳದಲ್ಲೇ ಇದ್ದರು. ಆಕೆಯ ಮಗ ಅತುಲ್ ಕೂಡ ಅದರಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಇದೆ. ಶ್ರೀಲತಾ ತನ್ನನ್ನು ಸಿಸಿಬಿ ಅಧಿಕಾರಿ ಎಂದು ಅಲ್ಲಿ ಪರಿಚಿಯಿಸಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಆಕೆ ತನ್ನ ಹುದ್ದೆಯನ್ನು ದುರುಪಯೋಗ ಮಾಡಿಕೊಂಡಿರುವ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಘಟನೆಯ ಬಗ್ಗೆ ಹಾಸನದ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಸನ ಎಸ್ಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಶ್ರೀಲತಾ ಮತ್ತಾಕೆಯ ಮಗ ಅತುಲ್, ಎಸ್ಟೇಟ್ ಮಾಲಕ ಗಗನ್ ಜತೆ ವಾರದ ಹಿಂದೆಯೇ ನಿರಂತರ ಸಂಪರ್ಕ ಹೊಂದಿರುವುದು ತನಿಖೆ ವೇಳೆ ಗೊತ್ತಾಗಿದೆ. ಪಾರ್ಟಿ ಮಾಡಲು ಸ್ಥಳೀಯ ಪೊಲೀಸರ ಅನುಮತಿ ಬೇಕಾಗಿಲ್ಲ. ನಾನು ಮಂಗಳೂರು ಸಿಸಿಬಿಯಲ್ಲಿ ಎಎಸೈ ಆಗಿದ್ದು, ಪ್ರಭಾವ ಹೊಂದಿದ್ದೇನೆ ಎಂದು ಎಸ್ಟೇಟ್ ಮಾಲಕನಿಗೆ ಶ್ರೀಲತಾ ಧೈರ್ಯ ತುಂಬಿದ್ದರು ಎಂಬ ಅಂಶವೂ ತನಿಖೆಯಿಂದ ಬಯಲಾಗಿದೆ. ಘಟನೆಯಲ್ಲಿ ಶ್ರೀಲತಾರ ಪಾತ್ರದ ಬಗ್ಗೆ ಹಿರಿಯ ಅಧಿಕಾರಿಯಿಂದ ಸಮಗ್ರ ತನಿಖೆ ನಡೆಸಲಾಗುವುದು. ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.

ಎ.10ರಂದು ನಡೆದ ರೇವ್ ಪಾರ್ಟಿಯಲ್ಲಿ ಮಂಗಳೂರು, ಬೆಂಗಳೂರು, ಗೋವಾದಿಂದ ಬಂದ ಯುವಕ, ಯುವತಿಯರು ಪಾಲ್ಗೊಂಡಿದ್ದರು. ಮಾಹಿತಿ ತಿಳಿದ ಹಾಸನ ಪೊಲೀಸರು ಅಂದು ಮುಂಜಾನೆ ದಾಳಿ ಮಾಡಿದ್ದರು. ಆವಾಗ 131 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News