ಪೊಲೀಸರು ಹೊಸ ಸವಾಲುಗಳನ್ನು ಎದುರಿಸುವುದು ಅಗತ್ಯ: ಕಾವೇರಿ

Update: 2021-04-17 17:10 GMT

ಉಡುಪಿ, ಎ.17: ಕಣ್ಣಿಗೆ ಕಾಣದ ಆರೋಪಿಗಳು ಎಸಗುವ ಸೈಬರ್ ಕ್ರೈಮ್ ನಂತಹ ಹೊಸ ಹೊಸ ಸವಾಲುಗಳನ್ನು ಪೊಲೀಸರು ಇಂದು ಎದುರಿಸಬೇಕಾ ಗಿದೆ ಎಂದು ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದ್ಯ ಕಾರ್ಯದರ್ಶಿ ಕಾವೇರಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಶನಿವಾರ ಉಡುಪಿ ಹೊಟೇಲ್ ಸ್ವದೇಶ್ ಹೆರಿಟೇಜ್ ಸಭಾಂಗಣದಲ್ಲಿ ಆಯೋಜಿಸಲಾದ ಮುಖ್ಯ ಮಂತ್ರಿ ಪದಕ ವಿಜೇತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಅಭಿನಂದನಾ ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.

ಕೇವಲ ಮೊಬೈಲ್ ನಂಬರ್ ಮೂಲಕ ನಮ್ಮ ವೈಯಕ್ತಿಕ ಮಾಹಿತಿಗಳನ್ನೇ ಕದಿಯುವಂತಹ ಸೈಬರ್ ಕ್ರಿಮಿನಲ್ ಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಆದುದರಿಂದ ಶಾಪಿಂಗ್ ಮಾಲ್‌ಗಳಲ್ಲಿ ಪಾಯಿಂಟ್ ಆಸೆಗಾಗಿ ಮೊಬೈಲ್ ನಂಬರ್‌ಗಳನ್ನು ಕೊಡುವ ಕೆಲಸ ಮಾಡಬಾರದು. ಆ ನಂಬರ್ ಇಟ್ಟುಕೊಂಡೇ ಕ್ರಿಮಿನಲ್‌ಗಳು ಅಪರಾಧವನ್ನು ಎಸಗುತ್ತಿದ್ದಾರೆ ಎಂದು ಅವರು ದೂರಿದರು.

ದಿನದ 24 ಗಂಟೆಗಳ ಕಾಲವೂ ಕರ್ತವ್ಯ ನಿರ್ವಹಿಸುವ ಪೊಲೀಸರ ಕುರಿತ ಮನೋ ಭಾವವನ್ನು ಜನರು ಬದಲಾಯಿಸಬೇಕು. ಪೊಲೀಸ್ ಕೆಲಸ ಕೂಡ ಸಮಾಜ ಸೇವೆ ಆಗಿದೆ. ಜನರಿಗೆ ಯಾವುದೇ ತೊಂದರೆ ಎದುರಾದರೂ ಎಲ್ಲದಕ್ಕೂ ಪೊಲೀಸರೇ ಬೇಕು. ಹಾಗಾಗಿ ಪೊಲೀಸರು ಜನರಿಗೆ ಹತ್ತಿರವಾದ ಸೇವೆಯನ್ನು ನೀಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪದಕ ವಿಜೇತ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯ್ಕಿ, ಬೆಂಗಳೂರು ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಎಂ.ರಾಘವೇಂದ್ರ ಬೈಂದೂರು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್‌ಕಾನ್‌ಸ್ಟೇಬಲ್ ಶಂಕರ ಪೂಜಾರಿ ಬಿಜೂರು ಅವರನ್ನು ಸನ್ಮಾನಿಸಲಾಯಿತು.

ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಪ್ರಕಾಶ್ ಕಣಿವೆ ಶುಭಾಶಂಸನೆಗೈದರು. ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಎಂ.ನಾಗೇಶ್ ಹೆಗ್ಡೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ ವತಿ ಯಿಂದಲೂ ಸಾಧಕರನ್ನು ಅಭಿನಂದಿಸಲಾಯಿತು. ಮಲಬಾರ್ ಗೋಲ್ಡ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಝ್ ರೆಹಮಾನ್, ಗೆಸ್ಟ್ ರಿಲೇಷನ್ ಮೆನೇಜರ್ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.

ಹಿರಿಯ ವಕೀಲ ಆನಂದ ಮಡಿವಾಳ ಸನ್ಮಾನಿತರ ಪರಿಚಯ ಮಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಸ್ವಾಗತಿಸಿದರು. ವಿನಯಚಂದ್ರ ಸಾಸ್ತಾನ ವಂದಿಸಿದರು. ವಕೀಲ ರಾಜಶೇಖರ ಶಾಮರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News