ಮಂಗಳೂರಿನಲ್ಲಿ ಮೀನಿಗೆ ಬರ: ದರದಲ್ಲಿ ಭಾರೀ ಏರಿಕೆ!

Update: 2021-04-18 16:01 GMT

ಮಂಗಳೂರು, ಎ.18: ಸದಾ ಗಿಜಿಗುಡುತ್ತಿದ್ದ ಮಂಗಳೂರು ದಕ್ಕೆಯಲ್ಲಿ ಮೀನಿಗೆ ಬರ ಕಾಣಿಸಿವೆ. ಇದರ ನೇರ ಪರಿಣಾಮ ಮೀನಿನ ದರದ ಮೇಲಾಗಿದೆ. ಅಂದರೆ ದೇಶ-ವಿದೇಶಗಳಿಗೆ ಮೀನನ್ನು ರಫ್ತು ಮಾಡುತ್ತಿದ್ದ ಮಂಗಳೂರಿನಲ್ಲಿ ನಿರೀಕ್ಷಿತ ಪ್ರಮಾಣದ ಮೀನುಗಳು ಸಿಗುತ್ತಿಲ್ಲ.

ಈ ಮಧ್ಯೆ ನಗರದ ಮಾಂಸಾಹಾರಿ ಹೊಟೇಲ್‌ಗಳಲ್ಲಿ ಕೂಡ ಮೀನಿನ ಕೊರತೆಯಿಂದ ಮೀನಿನ ಬಗೆಬಗೆಯ ಖಾದ್ಯಗಳು ಯಥೇಚ್ಛವಾಗಿ ಸಿಗದ ಕಾರಣ ಪ್ರವಾಸಿಗರ ಆಸೆಗೂ ತಣ್ಣೀರೆರಚಿದಂತಾಗಿದೆ ಎಂಬ ಮಾತು ಕೇಳುತ್ತಿದೆ. ದೇಶ-ವಿದೇಶ ಸಹಿತ ರಾಜ್ಯದ ನಾನಾ ಕಡೆಯಿಂದ ಮಂಗಳೂರಿಗೆ ಪ್ರವಾಸಿಗರು ಮೀನಿನ ರುಚಿ ಸವಿಯಲು ಬಂದರೂ ಕೂಡ ಗುಣಮಟ್ಟದ ಒಳ್ಳೆಯ ತಳಿಯ ಬಗೆಬಗೆಯ ಮೀನುಗಳು ಸಿಗುತ್ತಿಲ್ಲ. ಅದರಲ್ಲೂ ಕಳೆದೊಂದು ವಾರದ ಅಂತರದಲ್ಲಿ ಮೀನಿನ ದರದಲ್ಲಿ ವಿಪರೀತ ಏರಿಕೆಯಾಗಿರುವುದು ಮೀನುಪ್ರಿಯರಲ್ಲಿ ನಿರಾಶೆ ಮೂಡಿಸಿದೆ.

ಸಮುದ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದ ಕಾರಣ ಬೋಟ್‌ಗಳು ಲಂಗರು ಹಾಕಿದೆ. ಇದರಿಂದ ಮೀನುಗಾರರು ಪರ್ಯಾಯ ಕೆಲಸ ಮಾಡಲು ಆರಂಭಿಸಿದ್ದಾರೆ. ಒಮ್ಮೆ ಒಂದು ಕೆಲಸದಲ್ಲಿ ಭದ್ರತೆ ಸಿಕ್ಕ ಬಳಿಕ ಮತ್ತೆ ಮೀನುಗಾರಿಕೆಗೆ ಮರಳಲು ಹಿಂದೇಟು ಹಾಕುವವರ ಸಂಖ್ಯೆಯೇ ಜಾಸ್ತಿಯಾಗಿದೆ. ಇದರಿಂದ ಮೀನುಗಾರಿಕೆಯಿಂದ ಮೀನುಗಾರರ ಸಮುದಾಯವೂ ವಿಮುಖವಾಗುತ್ತಿದೆ ಎನ್ನಲಾಗಿದೆ. ಇನ್ನೊಂದೆಡೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ಸಿಗದ ಕಾರಣ ಮೀನು ವ್ಯಾಪಾರಿಗಳು/ಬೋಟ್ ಮಾಲಕರು ಕಂಗಾಲಾಗಿದ್ದು, ಇದು ಕೂಡ ಮೀನುಗಾರಿಕೆಯ ಮೇಲೆ ಭಾರೀ ಪರಿಣಾಮ ಬೀರಿದೆ.

ಮೀನುಗಳು ಕಡಿಮೆ ಪ್ರಮಾಣದಲ್ಲಿ ಸಿಗುವುದರಿಂದ ಅದರ ದರಗಳಲ್ಲಿ ಏರಿಕೆಯಾಗುತ್ತಿರುವುದು ಸಹಜ. ಕಳೆದ ಒಂದು ವಾರದ ಅಂತರದಲ್ಲಿ ಮೀನಿನ ದರದಲ್ಲಿ ಭಾರೀ ಏರಿಕೆಯಾಗಿವೆ. 1 ಕೆಜಿ ಅಂಜಲ್ ಮೀನೀಗೆ 380 ರೂ. ಇದ್ದುದು ಈಗ 700 ರೂ.ಗೆ ಏರಿದೆ. ಕಪ್ಪು ಮಾಂಜಿ 300 ರೂ. ಇದ್ದುದು 700 ರೂ., ಡಿಸ್ಕೋ ಮೀನು 100 ರೂ.ಇದ್ದುದು 300 ರೂ., ಬೊಲ್ಲೆಂಜೀರ್ 100 ರೂ. ಇದ್ದುದು 250 ರೂ., ಬಿಳಿ ಮಾಂಜಿ 1000 ರೂ. ಇದ್ದುದು 1,250 ರೂ., ಬಂಗುಡೆ 120 ರೂ. ಇದ್ದುದು 300 ರೂ, ಕೊಡ್ಡಾಯಿ 100 ರೂ. ಇದ್ದುದು 150 ರೂ, ಬೂತಾಯಿ 80 ರೂ. ಇದ್ದುದು 160 ರೂ., ಮುರುಮೀನು 200 ರೂ. ಇದ್ದುದು 300 ರೂ.ಗೆ ಏರಿದೆ.

ಹೀಗೆ ಮೀನಿನ ದರದಲ್ಲಿ ದುಪ್ಪಟ್ಟು ಹೆಚ್ಚಾದುದರಿಂದ ಅದನ್ನೇ ನಂಬಿ ಹೊಟೇಲ್ ಉದ್ಯಮ ನಡೆಸುತ್ತಿದ್ದವರು ಇದೀಗ ನಷ್ಟಕ್ಕೀಡಾಗಿದ್ದಾರೆ. ರಮಝಾನ್ ಉಪವಾಸವಾದ್ದರಿಂದ ಗ್ರಾಹಕರ ಸಂಖ್ಯೆಯಲ್ಲೂ ತುಂಬಾ ಕಡಿಮೆ ಇದೆ. ಮೀನಿನ ಉತ್ಪನ್ನದಲ್ಲಿ ಇಳಿಕೆ ಮತ್ತು ದರದಲ್ಲಿ ಹೆಚ್ಚಳವಾದದ್ದರಿಂದ ಹೊಟೇಲ್ ಉದ್ಯಮಿಗಳು ಮಾತ್ರವಲ್ಲ ಅದನ್ನು ನಂಬಿ ಹೊಟೇಲಿನಲ್ಲಿ ಕೆಲಸ ಮಾಡುವವರು ಕೂಡ ಇದೀಗ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

‘ನಾವೆಲ್ಲಾ ಸಬ್ಸಿಡಿ ಸೀಮೆಎಣ್ಣೆಯನ್ನೇ ನಂಬಿ ಮಂಗಳೂರು ದಕ್ಕೆಯಲ್ಲಿ ಮೀನಿನ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇವೆ. ಕಳೆದ ನಾಲ್ಕೈದು ತಿಂಗಳಿನಿಂದ ನಮಗೆ ಡೀಸೆಲ್ ಸಬ್ಸಿಡಿ ಸಿಕ್ಕಿಲ್ಲ. ಸಚಿವರು ಈ ಬಗ್ಗೆ ಭರವಸೆ ನೀಡಿದರೂ ಕೂಡ ಅದಿನ್ನೂ ಬೋಟ್ ಮಾಲಕರ ಖಾತೆಗೆ ಜಮೆ ಆಗಿಲ್ಲ. ಈ ಬಗ್ಗೆ ನಾವು ಸಾಕಷ್ಟು ಬಾರಿ ಮನವಿಯನ್ನೂ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಸಕಾಲಕ್ಕೆ ಸಬ್ಸಿಡಿ ಸೀಮೆಎಣ್ಣೆ ಸಿಗದ ಕಾರಣ ನಾವು ಬೋಟುಗಳನ್ನು ಕಡಲಿಗೆ ಇಳಿಸಲಾಗದಂತಹ ಸ್ಥಿತಿಯಲ್ಲಿದ್ದೇವೆ’ ಎಂದು ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಅಲಿ ಹಸನ್ ಹೇಳುತ್ತಾರೆ.

‘ಕೇರಳ ಹಾಗೂ ತಮಿಳುನಾಡಿನಲ್ಲಿ ನಡೆದ ಚುನಾವಣೆಗೆ ಹೋದವರು ಇನ್ನೂ ಬಂದಿಲ್ಲ. ಇದರಿಂದ ಕರಾವಳಿಯ ಬಹಳಷ್ಟು ಮೀನುಗಾರಿಕಾ ಬೋಟ್‌ಗಳು ಲಂಗರು ಹಾಕಿವೆ. ಅವರು ಮರಳಿ ಬಾರದೆ ಬೋಟನ್ನು ಕಡಲಿಗೆ ಇಳಿಸಲು ಸಾಧ್ಯವಿಲ್ಲ’ ಎಂದು ಮೀನುಗಾರರಾದ ಹರೀಶ್ ಮೊಗವೀರ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News