ಬರ್ತ್‌ಡೇ ಬಾಯ್ ಮುಕೇಶ್ ಅಂಬಾನಿ ಕುರಿತು ಈ ಕುತೂಹಲಕರ ಸಂಗತಿಗಳು ನಿಮಗೆ ಗೊತ್ತೇ?

Update: 2021-04-19 14:51 GMT
photo:twitter (@_MukeshAmbani)

ಖ್ಯಾತ ಕೈಗಾರಿಕೋದ್ಯಮಿ,ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿಯವರು ಇಂದು ಸೋಮವಾರ ತನ್ನ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಂತೆ ಅಂಬಾನಿ 73 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕೋವಿಡ್-19 ಎರಡನೇ ಅಲೆಯ ನಡುವೆ ರೋಗಿಗಳ ಚಿಕತ್ಸೆಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ರಿಫೈನರಿಗಳಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಮಹಾರಾಷ್ಟ್ರದಂತಹ ಅತ್ಯಂತ ಪೀಡಿತ ರಾಜ್ಯಗಳಿಗೆ ಪೂರೈಸುತ್ತಿದೆ. ಕಳೆದ ವರ್ಷ ಕೋವಿಡ್-19 ಮೊದಲನೆಯ ಅಲೆಯ ಸಂದರ್ಭದಲ್ಲಿ ಅಂಬಾನಿಯವರು ಪಿಎಂ ಕೇರ್ಸ್ ನಿಧಿಗೆ ಹೆಚ್ಚುವರಿ 500 ಕೋ.ರೂ.ಗಳ ದೇಣಿಗೆಯನ್ನು ಪ್ರಕಟಿಸಿದ್ದರು. ಯೆಮೆನ್‌ನ ಏಡೆನ್‌ನಲ್ಲಿ 1957,ಎ.19ರಂದು ಜನಿಸಿದ್ದ ಮುಕೇಶ ಅಂಬಾನಿಯವರ ತಂದೆ ಧೀರುಭಾಯಿ ಅಂಬಾನಿಯವರು 1966ರಲ್ಲಿ ಸಣ್ಣ ಜವಳಿ ಕಂಪನಿಯಾಗಿ ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಷನ್ (ಈಗಿನ ರಿಲಯನ್ಸ್ ಇಂಡಸ್ಟೀಸ್) ಅನ್ನು ಆರಂಭಿಸಿದ್ದರು. ಬಾಂಬೆ ವಿವಿಯಿಂದ ಕೆಮಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಮುಕೇಶ್ 1981ರಲ್ಲಿ ಕುಟುಂಬದ ಉದ್ಯಮದ ಜೊತೆಗೆ ಕೈಜೋಡಿಸಿದ್ದರು. ಅವರ ಕುರಿತು ಐದು ಕುತೂಹಲಕರ ವಿಷಯಗಳು ಇಲ್ಲಿವೆ......

ಹಾರೂನ್ ಗ್ಲೋಬಲ್ ರಿಚ್ ಲಿಸ್ಟ್ 2021ರಂತೆ ಮುಕೇಶ್ ಭಾರತದ ನಂ.1 ಶ್ರೀಮಂತ ಹಾಗೂ ವಿಶ್ವದಲ್ಲಿ ಎಂಟನೆಯ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರು ಏಷ್ಯಾದಲ್ಲಿ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಮುಕೇಶ ವಿಶ್ವದಲ್ಲಿಯೇ ಅತ್ಯಂತ ದುಬಾರಿ ನಿವಾಸವನ್ನು ಹೊಂದಿದ್ದಾರೆ. ದಕ್ಷಿಣ ಮುಂಬೈನಲ್ಲಿರುವ ಆ್ಯಂಟಿಲಾ 27 ಅಂತಸ್ತುಗಳನ್ನು ಹೊಂದಿದ್ದು,ಮೂರು ಹೆಲಿಪ್ಯಾಡ್‌ಗಳಿವೆ. ಕಾರುಗಳ ಪಾರ್ಕಿಂಗ್‌ಗಾಗಿಯೇ ಆರು ಅಂತಸ್ತುಗಳಿದ್ದು,600ಕ್ಕೂ ಅಧಿಕ ನೌಕರರಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಕಾರ್ಯಾರಂಭಗೊಂಡ ಮುಕೇಶರ ರಿಲಯನ್ಸ್ ಜಿಯೊ ಇಂದು ಫೆರಾರಿ ಮತ್ತು ಕೋಕಾ-ಕೋಲಾದಂತಹ ಬ್ರಾಂಡ್‌ಗಳ ಸಾಲಿನಲ್ಲಿ ವಿಶ್ವದ ಐದನೇ ಅತ್ಯಂತ ಬಲಿಷ್ಠ ಬ್ರಾಂಡ್ ಆಗಿದೆ. ಸುಮಾರು 40 ಕೋಟಿ ಚಂದದಾರರೊಂದಿಗೆ ರಿಲಯನ್ಸ್ ಜಿಯೋ ಬಹುಬೇಗನೆ ಭಾರತದ ಅತ್ಯಂತ ದೊಡ್ಡ ಮತ್ತು ವಿಶ್ವದ ಮೂರನೇ ಅತ್ಯಂತ ದೊಡ್ಡ ಮೊಬೈಲ್ ನೆಟ್‌ವರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಾರ್ಚ್ 31,2020ಕ್ಕೆ ಕೊನೆಗೊಂಡ ಹಣಕಾಸು ವರ್ಷದ ವಿವರಗಳಂತೆ ಸತತ 12 ವರ್ಷ ಮುಕೇಶ್ ರಿಲಯನ್ಸ್‌ನಿಂದ ತನ್ನ ವಾರ್ಷಿಕ ವೇತನವನ್ನು 15 ಕೋ.ರೂ.ಗಳಿಗೆ ಸೀಮಿತಗೊಳಿಸಿಕೊಂಡಿದ್ದರು. ಅದರ ನಂತರ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅವರು ವೇತನವನ್ನು ಪಡೆಯುವುದನ್ನು ನಿಲ್ಲಿಸಿದ್ದಾರೆ.

ಮುಕೇಶ್ ವಿಶ್ವದಲ್ಲಿಯ ಕೆಲವು ಅತ್ಯುತ್ತಮ ಮತ್ತು ಅಪರೂಪದ ಕಾರುಗಳ ಒಡೆಯನಾಗಿದ್ದಾರೆ. ಮರ್ಸಿಡಿಸ್ ಮೇಬ್ಯಾಚ್ 660 ಗಾರ್ಡ್,ಬಿಎಂಡಬ್ಲು 760 ಲಿ,ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್,ಬೆಂಟ್ಲಿ ರ್ಯಾಪಿಡೆ ಮತ್ತು ರೋಲ್ಸ್ ರಾಯ್ಸ್ ಫ್ಯಾಂಟನ್ ಡ್ರಾಪ್‌ಹೆಡ್ ಕಪಲ್ ಇವುಗಳಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News