ಗ್ರಾಪಂ ಮಟ್ಟದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಪಡೆ ರಚನೆ

Update: 2021-04-19 17:04 GMT

ಮಂಗಳೂರು, ಎ.19: ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ ನೈರ್ಮಲ್ಯದಡಿ ಸುಸ್ಥಿರತೆಯನ್ನು ಕಾಪಾಡುವುದು ಗ್ರಾಪಂಗಳ ಪ್ರಮುಖ ಕರ್ತವ್ಯವಾಗಿದೆ. ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಮನೆ ಹಂತದಲ್ಲಿಯೇ ನಿರ್ವಹಣೆ ಮಾಡಿಕೊಂಡು ಗೊಬ್ಬರ ಮಾಡಿಕೊಳ್ಳಲು ಹಾಗೂ ಒಣ ಕಸಗಳನ್ನು ಗ್ರಾಪಂ ವತಿಯಿಂದ ಸಂಗ್ರಹಿಸಿಕೊಂಡು ವಿಲೇವಾರಿ ನಡೆಸಲು ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಲು ಮತ್ತು ಅಂತಹವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಗ್ರಾಪಂ ಮಟ್ಟದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಪಡೆಯನ್ನು ರಚಿಸಲಾಗಿದೆ.

 ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಪಡೆ ಜವಾಬ್ದಾರಿಗಳು:  ಗ್ರಾಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು. ರಾಷ್ಟ್ರೀಯ/ರಾಜ್ಯ ಹಾಗೂ ಸ್ಥಳೀಯ ರಸ್ತೆಗಳ ಅಂಚಿನಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯಗಳನ್ನು ತಂದು ರಾಶಿ ಹಾಕುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದರೊಂದಿಗೆ ಈ ಸ್ಥಳಗಳಲ್ಲಿ ಹಗಲು ಮತ್ತು ರಾತ್ರಿ ಹೊತ್ತು ಪಾಳಿಗಳಲ್ಲಿ ಗಸ್ತು ತಿರುಗಿ ಕಸ ಬಿಸಾಡುವವರ ಮತ್ತು ವಾಹನದ ಮೇಲೆ ಶಿಸ್ತು ಕ್ರಮಗಳನ್ನು ಜರುಗಿಸಬೇಕು. ಕಸ ತಂದು ಸುರಿಯುವ ವಾಹನದ ಮಾಲಕರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತಪ್ಪಿತಸ್ಥರ ಮೇಲೆ ಗ್ರಾಪಂ ನಿರ್ದಿಷ್ಟ ಮೊತ್ತದ ದಂಡವನ್ನು ವಿಧಿಸಿ ವಾಹನದ ನೋಂದಣಿ ರದ್ದು ಪಡಿಸಲು ಪ್ರಾದೇಶಿಕ ಸಾರಿಗೆ ಇಲಾಖೆಗೆ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಸವನ್ನು ರಾಶಿ ಹಾಕಲಾಗಿರುವ ಪ್ರದೇಶವನ್ನು ಶುಚಿಗೊಳಿಸಿ ಗಿಡ ನೆಡುವುದು, ಉದ್ಯಾನವನ ನಿರ್ಮಾಣ, ಗೋಡೆ ಬರಹದಿಂದ ಸುಂದರ ತಾಣವನ್ನಾಗಿ ಮಾರ್ಪಡಿಸುವುದು, ಬೃಹತ್ ತ್ಯಾಜ್ಯ ಉತ್ಪಾದಕರು (50 ಕೆಜಿಗಿಂತ ಹೆಚ್ಚಿನ/ವಾಣಿಜ್ಯ/ಮಾಂಸ ತ್ಯಾಜ್ಯ) ತಮ್ಮ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಬಗ್ಗೆ ನಿರ್ದೇಶನ ನೀಡುವುದು, ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿಯು 15 ದಿನಗಳಿಗೊಮ್ಮೆ ಸಭೆಯನ್ನು ನಡೆಸಿ, ಅನುಸರಣೆ ಕ್ರಮವನ್ನು ಕೈಗೊಳ್ಳಬೇಕು ಎಂದು ಜಿಪಂ ಸಿಇಒ ತಿಳಿಸಿದ್ದಾರೆ.

ದಂಡಗಳು ಮತ್ತು ಶಿಸ್ತು ಕ್ರಮಗಳು: ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವ ಮತ್ತು ಅವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಿಸುವವರ ಮೇಲೆ ನಿಯಮಾನುಸಾರ ದಂಡನೆ ಮತ್ತು ಶಿಸ್ತು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ನಿರ್ವಹಿಸುವ ಅಂಗಡಿ/ವಾಣಿಜ್ಯ ವರ್ತಕರ ಪರವಾನಿಗೆಯನ್ನು ನಿಯಮಾನುಸಾರ ರದ್ದುಗೊಳಿಸಲು ಕ್ರಮವಹಿಸಬೇಕು. ತ್ಯಾಜ್ಯವನ್ನು ಸುರಿಯುವ ವ್ಯಕ್ತಿ/ವಾಹನದ ಛಾಯಾಚಿತ್ರ ಮತ್ತು ಸಿ.ಸಿ ಕ್ಯಾಮರಾದ ವೀಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಕಟಿಸಿ ಪ್ರಚಾರ ನೀಡಬೇಕು. ಗ್ರಾಪಂ ವ್ಯಾಪ್ತಿಗೆ ಬಾರದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಿಸಿದ ಗ್ರಾಪಂಗೆ ಲಿಖಿತ ದೂರು ನೀಡಬೇಕು ಎಂದು ಸಿಇಒ ಡಾ.ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News