ಕೋವಿಡ್-19 ಪ್ರಕರಣ ಹೆಚ್ಚಳ ನಡುವೆಯೇ ಕುಸಿದ ಲಸಿಕೆ ಅಭಿಯಾನ

Update: 2021-04-20 03:55 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಎ.20: ದೇಶದಲ್ಲಿ ಕೋವಿಡ್-19 ಪ್ರಕರಣಗಳ ಗಣನೀಯ ಹೆಚ್ಚಳದ ನಡುವೆಯೇ ಕೋವಿಡ್ ವಿರುದ್ಧದ ಲಸಿಕೆ ನೀಡಿಕೆ ಕಳೆದ ವಾರ ಭಾರಿ ಇಳಿಕೆ ಕಂಡಿದೆ. ಎಪ್ರಿಲ್ 12-18ರ ಅವಧಿಯಲ್ಲಿ 28 ಲಕ್ಷ ಲಸಿಕೆ ಡೋಸ್ ನೀಡಲಾಗಿದ್ದು, ಇದು ಹಿಂದಿನ ವಾರಕ್ಕೆ (34.5 ಲಕ್ಷ) ಹೋಲಿಸಿದರೆ 6.5 ಲಕ್ಷದಷ್ಟು ಕಡಿಮೆ.

ಎಪ್ರಿಲ್ 5ರಂದು 43 ಲಕ್ಷ ಡೋಸ್‌ಗಳನ್ನು ನೀಡಿದ ಬಳಿಕ ಮುಂದಿನ 15 ದಿನಗಳಲ್ಲಿ 26 ರಿಂದ 36 ಲಕ್ಷ ಸರಾಸರಿಯಲ್ಲಿ ಓಲಾಡುತ್ತಿದ್ದ ಸಂಖ್ಯೆ ರವಿವಾರ ಅತ್ಯಂತ ಕನಿಷ್ಠ ಅಂದರೆ 12.3 ಲಕ್ಷ ತಲುಪಿತ್ತು. ತಮ್ಮ ಮೊದಲ ಡೋಸ್‌ಗಳನ್ನು ಪಡೆಯಲು ಕೆಲವೇ ಮಂದಿ ಮುಂದಾಗುತ್ತಿರುವುದು ಈ ಇಳಿಕೆಗೆ ಕಾರಣ.

ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಆಗಮಿಸಿದರೆ ಸೋಂಕು ತಗುಲುವ ಭೀತಿಯಿಂದ ಬಹಳಷ್ಟು ಮಂದಿ ಲಸಿಕೆ ಪಡೆಯಲು ಮುಂದಾಗುತ್ತಿಲ್ಲ ಎಂದು ಅಧಿಕಾರಿಗಳು ಮತ್ತು ವೈದ್ಯರು ಹೇಳುತ್ತಾರೆ. ಸೋಮವಾರ ರಾತ್ರಿ 8 ಗಂಟೆಯವರೆಗೆ 12.69 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ. ಸೋಮವಾರ 31.03 ಲಕ್ಷ ಡೋಸ್ ವಿತರಿಸಲಾಗಿದೆ. ಇದುವರೆಗೆ 1.74 ಕೋಟಿ ಮಂದಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ. ಈ ಪೈಕಿ 1.14 ಲಕ್ಷ ಮಂದಿ ಅರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಾಗಿದ್ದಾರೆ.

ಮೊದಲ ಡೋಸ್ ಪಡೆದವರಲ್ಲಿ 45-60 ವರ್ಷ ವಯೋಮಿತಿಯ 4.23 ಕೋಟಿ ಮಂದಿ ಸೇರಿದ್ದು, 60 ವರ್ಷ ಮೇಲ್ಪಟ್ಟ 4.66 ಕೋಟಿ ಮಂದಿ ತಮ್ಮ ಮೊದಲ ಡೋಸ್ ಪಡೆದಿದ್ದಾರೆ. 45-60 ವರ್ಷ ವಯೋಮಿತಿಯವರಿಗೆ ಲಸಿಕೆ ನೀಡಿಕೆಯನ್ನು ಎರಡನೇ ಹಂತದಲ್ಲಿ ಆರಂಭಿಸಲಾಗಿತ್ತು. ಇದೀಗ ಮೂರನೇ ಹಂತದಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News