ಕೋವಿಡ್ ಹೆಚ್ಚಳಕ್ಕೆ ಚುನಾವಣೆಗಳನ್ನು ದೂರುವಂತಿಲ್ಲ ಎಂಬ ಅಮಿತ್ ಶಾ ಹೇಳಿಕೆ ಎಷ್ಟು ಸರಿ?

Update: 2021-04-20 11:29 GMT

ಹೊಸದಿಲ್ಲಿ,ಎ.20: ಪ.ಬಂಗಾಳ,ತಮಿಳುನಾಡು,ಕೇರಳ,ಅಸ್ಸಾಂ ಮತ್ತು ಪುದುಚೇರಿಗಳಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆಯಾಗಿರುವುದಕ್ಕೆ ಅಲ್ಲಿನ ಚುನಾವಣೆಗಳನ್ನು ನಾವು ದೂರುವಂತಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಇತ್ತೀಚಿಗೆ ಹೇಳಿದ್ದಾರೆ. ಈ ಹೇಳಿಕೆಯ ಬೆನ್ನು ಹತ್ತಿದ ಸುದ್ದಿ ಜಾಲತಾಣ The Wire ನ ವರದಿ ಇಲ್ಲಿದೆ.

ಚುನಾವಣೆಗಳು ಮುಖ್ಯವಾಗಿವೆ ಮತ್ತು ಅವುಗಳನ್ನು ಸೂಕ್ತ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳೊಂದಿಗೆ ನಡೆಸಬೇಕು. ಟಿವಿ ಭಾಷಣಗಳು,ಸಣ್ಣ ಪ್ರಮಾಣದ ನೇರ ಪ್ರಸಾರದ ಸಭೆಗಳ ಬದಲು ಬೃಹತ್ ರ್ಯಾಲಿಗಳನ್ನು ಸಂಘಟಿಸುವುದು ಮತ್ತು ರೋಡ್ ಶೋಗಳನ್ನು ನಡೆಸುವುದರಲ್ಲಿ ನಿಜವಾದ ಸಮಸ್ಯೆಯಡಗಿದೆ.

ಈ ಐದೂ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಪ.ಬಂಗಾಳದಲ್ಲಿ ಇನ್ನೂ ಮತದಾನದ ಮೂರು ಹಂತಗಳು ಬಾಕಿಯಿವೆ. ಹೀಗಿರುವಾಗ ಶಾ ಅವರ ವಾದ ಸಮಸ್ಯಾತ್ಮಕವಾಗಿದೆ. ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ಅದನ್ನು ಕೊರೋನವೈರಸ್ನ ‘ವಿಶ್ವಗುರು’ವನ್ನಾಗಿ ಮಾಡಬಲ್ಲ ಈ ಸಮಯದಲ್ಲಿ ಶಾ ಅವರ ಈ ಹೇಳಿಕೆಯು ಬೃಹತ್ ಜನಜಂಗುಳಿಯಿಂದ ಕೂಡಿದ ಕಾರ್ಯಕ್ರಮಗಳನ್ನು ಏರ್ಪಡಿಸುವಲ್ಲಿ ಯಾವುದೇ ತಪ್ಪು ಇಲ್ಲ ಎಂಬ ಅರ್ಥವನ್ನು ನೀಡುತ್ತದೆ.
  
ಶಾ ಮತ್ತು ಬಿಜೆಪಿ ಸರಕಾರ ದತ್ತಾಂಶಗಳನ್ನು ಹೆಚ್ಚಾಗಿ ನೆಚ್ಚಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದಾರೆ ಮತ್ತು ಅಂತಹ ದತ್ತಾಂಶ ಅಸ್ತಿತ್ವದಲ್ಲಿ ಇಲ್ಲದಿದ್ದರೆ ನಿರ್ದಿಷ್ಟ ಕಾರ್ಯಕ್ರಮ ಅಥವಾ ವಿದ್ಯಮಾನ ನಡೆದೇ ಇಲ್ಲ ಎಂದು ಹೇಳುವಲ್ಲಿ ನಿಸ್ಸೀಮರಾಗಿದ್ದಾರೆ. ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದ್ದ ಜನರು ಮತ್ತು ಕೋವಿಡ್ ಸೋಂಕುಗಳ ನಡುವೆ ನಂಟು ಸ್ಥಾಪಿಸಲು ಸಂಖ್ಯಾಶಾಸ್ತ್ರಜ್ಞರಿಗೆ ಸಮಯಾವಕಾಶ ಬೇಕಾಗುತ್ತದೆ. ಆದರೆ ಇಂತಹ ಅಂಕಿಅಂಶಗಳು ಪ್ರಸ್ತುತಕ್ಕೆ ಲಭ್ಯವಿಲ್ಲವೆಂದ ಮಾತ್ರಕ್ಕೆ ರ್ಯಾಲಿಗಳು ಮತ್ತು ಸಭೆಗಳು ವೈರಸ್ ಎಂದಿಗಿಂತ ಹೆಚ್ಚಾಗಿ ಪ್ರಸಾರಗೊಳ್ಳಲು ಅವಕಾಶ ನೀಡಿದ್ದವು ಎಂಬ ವಾಸ್ತವವನ್ನು ತಳ್ಳಿಹಾಕುವಂತಿಲ್ಲ. 

ಎ.1ರಿಂದ ಪ.ಬಂಗಾಳದಲ್ಲಿ ಮಹಾರಾಷ್ಟ್ರ ಅಥವಾ ದಿಲ್ಲಿಗಿಂತ ಹೆಚ್ಚು ವೇಗವಾಗಿ ಕೊರೋನವೈರಸ್ ಸೋಂಕು ಹಬ್ಬುತ್ತಿರುವುದು ಇಂತಹ ನಂಟಿನ ಬಗ್ಗೆ ಈಗಾಗಲೇ ಸುಳಿವು ನೀಡಿದೆ. ಚುನಾವಣೆಗಳಿಗೂ ಕೋವಿಡ್ ಹೆಚ್ಚಳಕ್ಕೂ ಸಂಬಂಧವಿಲ್ಲ ಎಂದು ಶಾ ಹೇಳುವಾಗ,ಪ.ಬಂಗಾಳದಲ್ಲಿ ಎ.1ರಂದು ಇದ್ದ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯು ಎ.18ರಂದು ಶೇ.1,040ರಷ್ಟು (8,419 ಪ್ರಕರಣಗಳು) ಏರಿಕೆಯಾಗಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರವನ್ನೂ ನೀಡಬೇಕಾಗುತ್ತದೆ. ಪ.ಬಂಗಾಳದಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ದಿಲ್ಲಿಗಿಂತ ಐದು ಪಟ್ಟು ಮತ್ತು ಮಹಾರಾಷ್ಟ್ರಕ್ಕಿಂತ ಹತ್ತು ಪಟ್ಟು ಹೆಚ್ಚು ವೇಗದಲ್ಲಿ ಏರಿಕೆಯಾಗುತ್ತಿದೆ.

ಸುರಕ್ಷಿತ ಅಂತರ,ಮಾಸ್ಕ್ ಧಾರಣೆ ಮತ್ತು ಕೈಗಳನ್ನು ಪದೇ ಪದೇ ತೊಳೆದುಕೊಳ್ಲುವುದು ಇವು ಇಂದು ಯಾವುದೇ ವ್ಯಕ್ತಿಗೆ ಪ್ರಧಾನ ಮಾರ್ಗಸೂಚಿಗಳಾಗಿವೆ. ಆದರೆ ಪ.ಬಂಗಾಳದಲ್ಲಿಯ ಚುನಾವಣಾ ರ್ಯಾಲಿಗಳಲ್ಲಿ ಇವುಗಳನ್ನು ಜನರು,ಶಾರಂತಹ ನಾಯಕರು ಮತ್ತು ಸಂಘಟಕರು ಮರೆತೇಬಿಟ್ಟಿದ್ದರು. ಹರಿದ್ವಾರದಲ್ಲಿಯ ಕುಂಭಮೇಳದಲ್ಲಿ ದೇಶಾದ್ಯಂತದಿಂದ ಸುಮಾರು 30 ಲ.ಜನರು ಪಾಲ್ಗೊಂಡಿದ್ದು, ಒಂದೇ ವಾರದಲ್ಲಿ ಅಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಿದೆ. ಅದರಲ್ಲಿ ಭಾಗವಹಿಸಿದ್ದವರು ತಮ್ಮ ಊರುಗಳಿಗೆ ಮರಳಿದ ಬಳಿಕವೂ ಪಾಸಿಟಿವ್ ಆಗಿದ್ದಾರೆ. 

ಈ ಹಿನ್ನೆಲೆಯಲ್ಲಿ ಕುಂಭಮೇಳವನ್ನು ಸಾಂಕೇತಿಕವಾಗಿಸುವಂತೆ ಕೇಂದ್ರವು ಸಂಘಟಕರನ್ನು ಕೋರಿಕೊಂಡಿದೆ ಎಂದು ಇದೇ ಶಾ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ. ಅಂದರೆ ಬೃಹತ್ ಪ್ರಮಾಣದಲ್ಲಿ ಸಮಾವೇಶಗಳು ಅಪಾಯಕಾರಿ ಎನ್ನುವುದು ತನಗೆ ಗೊತ್ತು ಎನ್ನುವುದನ್ನು ಕೇಂದ್ರವು ಒಪ್ಪಿಕೊಂಡಿದೆ. ಆದರೂ ಶಾ ಚುನಾವಣೆಗಳಿಗೂ ಕೋವಿಡ್ ಹೆಚ್ಚಳಕ್ಕೂ ಸಂಬಂಧವಿಲ್ಲ ಎಂಬ ವಿತಂಡವಾದವನ್ನು ಮುಂದಿಟ್ಟಿದ್ದಾರೆ!

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News