ಯುಜಿಸಿ-ಎನ್ಇಟಿ ಪರೀಕ್ಷೆ ಮುಂದೂಡಿಕೆ

Update: 2021-04-20 16:59 GMT

ಹೊಸದಿಲ್ಲಿ, ಎ.20: ಮೇ 2ರಿಂದ ಮೇ 17ರವರೆಗೆ ನಡೆಯಲಿದ್ದ 2020ನೇ ಸಾಲಿನ ಯುಜಿಸಿ ಎನ್ಇಟಿ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಮಂಗಳವಾರ ಮುಂದೂಡಿದೆ. ದೇಶಾದ್ಯಂತ ಕೋರೋನ ಹಾವಳಿ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ಅದು ತಿಳಿಸಿದೆ. 2020ರ ಡಿಸೆಂಬರ್ ಸಾಲಿನ ಯುಜಿಸಿ ಎನ್ಇಟಿ ಪರೀಕ್ಷೆ ಡಿಸೆಂಬರ್ ನಡೆಯಬೇಕಾಗಿತ್ತು. ಆದರೆ ಕೊರೋನ ಸಾಂಕ್ರಾಮಿಕದ ಕಾರಣದಿಂದಾಗಿ ಅದನ್ನು ಹಲವು ಬಾರಿ ಮುಂದೂಡಲಾಗಿತ್ತು.

‘‘ಪ್ರಸಕ್ತ ಕೋವಿಡ್19 ಸಾಂಕ್ರಾಮಿಕದ ಪರಿಸ್ಥಿತಿ ಹಾಗೂ ಅಭ್ಯರ್ಥಿಗಳು ಮತ್ತು ಪರೀಕ್ಷಾ ಕರ್ತವ್ಯದಲ್ಲಿರುವವರ ಕ್ಷೇಮ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು 2020ರ ಸಾಲಿನ ಯುಜಿಸಿ ಎನ್ಇಟಿ ಪರೀಕ್ಷೆ (ಮೇ 2021)ಯನ್ನು ಮುಂದೂಡಲು ನಿರ್ಧರಿಸಲಾಗಿದೆ’’ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ, ಅಧಿಕೃತ ನೋಟಿಸ್ ಒಂದರಲ್ಲಿ ತಿಳಿಸಿದೆ.

 2021ನೇ ಸಾಲಿನ ಯುಜಿಸಿ ಎನ್ಇಟಿ ಪರೀಕ್ಷೆಯ ಪರಿಷ್ಕೃತ ದಿನಾಂಕಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ. ಏಶ್ಯದಲ್ಲಿ ಕೋವಿಡ್-19 ಸನ್ನಿವೇಶವನ್ನು ಪರಿಗಣನೆಗೆ ತೆಗೆದುಕೊಂಡು ನೂತನ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಅದು ಹೇಳಿದೆ. ನೂತನ ಪರೀಕ್ಷಾ ದಿನಾಂಕಗಳನ್ನು ಪರೀಕ್ಷೆಗೆ ನಡೆಯುವುದಕ್ಕೆ ಕನಿಷ್ಟ 15 ದಿವಸ ಮುಂಚಿತವಾಗಿ ಪ್ರಕಟಿಸಲಾಗುವುದು ಎಂದು ಎನ್ಟಿಎ ತಿಳಿಸಿದೆ.
 
ಯುಜಿಸಿ-ಎನ್ಇಟಿ ಪರೀಕ್ಷೆಯನ್ನು ಪ್ರತಿ ವರ್ಷ ಎರಡು ಬಾರಿ ಆಯೋಜಿಸಲಾಗುತ್ತದೆ. ಆದಾಗ್ಯೂ ಕೊರೋನ ಸಾಂಕ್ರಾಮಿಕದ ಪಿಡುಗಿನ ಹಿನ್ನೆಲೆಯಲ್ಲಿ 2020ರ ಜೂನ್ನಲ್ಲಿ ನಡೆಯಲಿದ್ದ ಪರೀಕ್ಷೆಯನ್ನು ಅದೇ ವರ್ಷದ ಸೆಪ್ಟೆಂಬರ್ನಿಂದ ನವೆಂಬರ್ವರಗೆ ಮುಂದೂಡಲಾಗಿತ್ತು. 2020ರ ಡಿಸೆಂಬರ್ ಆವೃತ್ತಿಯ ಪರೀಕ್ಷೆಯನ್ನು 2021ರ ಮಾರ್ಚ್-ಎಪ್ರಿಲ್ಗೆ ಮುಂದೂಡಲಾಗಿತ್ತು. ಆನಂತರ ಮತ್ತೆ ಅದನ್ನು ಮೇ ತನಕ ಮುಂದೂಡಲಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News