​ಶೀರೂರು ಮಠದ ವ್ಯವಹಾರದ ವಿರುದ್ಧ ನ್ಯಾಯಾಲಯದಲ್ಲಿ ದಾವೆ: ಲಾತವ್ಯ ಆಚಾರ್ಯ ಹೇಳಿಕೆ

Update: 2021-04-20 17:07 GMT

ಉಡುಪಿ, ಎ.20: ಎರಡು ವರ್ಷ 9 ತಿಂಗಳ ಹಿಂದೆ ಶೀರೂರು ಮಠದ ಅಂದಿನ ಯತಿಗಳಾದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ನಿಧನರಾದ ಬಳಿಕ ದ್ವಂದ್ವ ಮಠವಾದ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಆ ಮಠದ ಆಡಳಿತವನ್ನು ನಡೆಸುತ್ತಿರುವ ರೀತಿಯನ್ನು ಪ್ರಶ್ನಿಸಿ ನಾವು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದು, ಅದು ವಿಚಾರಣೆಯ ಹಂತದಲ್ಲಿರುವಾಗಲೇ ಮಠಕ್ಕೆ ನೂತನ ಯತಿಗಳನ್ನು ನೇಮಿಸಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಶ್ರೀಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರರಾದ ಲಾತವ್ಯ ಆಚಾರ್ಯ ಹಾಗೂ ವಾದಿರಾಜ ಆಚಾರ್ಯ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀರೂರು ಮಠಕ್ಕೆ ಸೇರಿದ ಆಸ್ತಿಪಾಸ್ತಿಯ ವ್ಯವಹಾರ, ತೆರಿಗೆ ಸಮಸ್ಯೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆಯನ್ನು ಕೋರಿ ನಾವು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದೇವೆ. ಅದು ಇತ್ಯರ್ಥಗೊಳ್ಳುವ ಮೊದಲೇ ಮಠದ ಉತ್ತರಾಧಿಕಾರಿಯ ನೇಮಕಕ್ಕೆ ಮುಂದಾಗಿರುವ ಕ್ರಮ ಸರಿಯಲ್ಲ ಎಂದವರು ಪ್ರತಿಪಾದಿಸಿದರು.

ಅಲ್ಲದೇ ಮಠಕ್ಕೆ ಸಕಲ ವಿದ್ಯಾಪಾರಂಗತನಾದ, ಪ್ರಬುದ್ಧ ವ್ಯಕ್ತಿಯೊಬ್ಬರನ್ನು ಉತ್ತರಾಧಿಕಾರಿ ಯಾಗಿ ನೇಮಿಸುವ ಬದಲು ಅಪ್ರಾಪ್ತ ಬಾಲಕನನ್ನು ನೇಮಿಸಲು ಮುಂದಾಗಿದ್ದಾರೆ ಎಂಬ ಮಾಹಿತಿಯಿಂದ ನಮಗೆ ತುಂಬಾ ನೋವಾಗಿದೆ. ಇದರ ವಿರುದ್ಧವೂ ನಾವು ನ್ಯಾಯಾಲಯದಲ್ಲಿ ದಾವೆ ಹೂಡುತ್ತೇವೆ ಎಂದು ಲಾತವ್ಯ ಆಚಾರ್ಯ ಹೇಳಿದರು.

3-4 ವರ್ಷಗಳ ಹಿಂದೆ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಬದುಕಿದ್ದಾಗ, ಉಡುಪಿ ಶ್ರೀಕೃಷ್ಣ ಮಠಕ್ಕೆ ಲಿಖಿತ ಸಂವಿಧಾನವೊಂದನ್ನು ರಚಿಸಲು ಹಾಗೂ ಮಠಕ್ಕೆ ಶಿಷ್ಯರನ್ನು ಸ್ವೀಕರಿಸುವಾಗ 10 ವರ್ಷಗಳ ಕಾಲ ವೇದಾದ್ಯಯನ ನಡೆಸಿದ , ಕನಿಷ್ಠ 21 ವರ್ಷ ಪ್ರಾಯದ ವಟುವನ್ನು ಆಯ್ಕೆ ಮಾಡುವಂತೆ ಎಲ್ಲಾ ಅಷ್ಟಮಠಗಳ ಶ್ರೀಗಳು ಒಪ್ಪಿದ್ದರು. ಆದರೆ ಈ ಸಂವಿಧಾನ ಅಧಿಕೃತವಾಗಿ ಜಾರಿಗೊಳ್ಳಲೇ ಇಲ್ಲ ಎಂದವರು ನುಡಿದರು.

ಶೀರೂರು ಮಠದಂಥ ಶ್ರೀಮಂತ ಮಠಕ್ಕೆ ಪ್ರಬುದ್ಧ ವ್ಯಕ್ತಿಯೊಬ್ಬರನ್ನು ನೇಮಿಸಬೇಕಿತ್ತು. ಅಷ್ಟ ಮಠಗಳೇ ನಡೆಸುವ ವಿದ್ಯಾಪೀಠಗಳಲ್ಲಿ ಇಂಥ ಸಾಕಷ್ಟು ಪ್ರಬುದ್ಧ ವಿದ್ಯಾರ್ಥಿಗಳಿದ್ದು, ಅವರು ಸನ್ಯಾಸ ಸ್ವೀಕಾರಕ್ಕೆ ಸಿದ್ಧರಿದ್ದಾರೆ. ಸೋದೆ ಶ್ರೀಗಳು ಈಗ ಅಪ್ರಾಪ್ತ ಬಾಲಕನನ್ನು ಉತ್ತರಾಧಿಕಾರಿಯಾಗಿ ನೇಮಿಸಿದರೆ, ಇದರ ವಿರುದ್ಧ ನಾವು ಕಾನೂನು ರೀತಿಯ ಹೋರಾಟ ನಡೆಸುತ್ತೇವೆ ಎಂದರು.

ಉಡುಪಿಯ ಅಷ್ಟಮಠಗಳ 800 ವರ್ಷಗಳ ಇತಿಹಾಸದಲ್ಲಿ ಮಠದ ಶ್ರೀಗಳೊಬ್ಬರು ಮೃತಪಟ್ಟಾಗ ಎರಡೂವರೆ ವರ್ಷ ಪೀಠ ಖಾಸಿ ಉಳಿದ ಇತಿಹಾಸವೇ ಇಲ್ಲ. ಆದರೆ ಸೋದೆ ಶ್ರೀಗಳು, ಇಷ್ಟು ಕಾಲದಿಂದ ಈ ಪೀಠವನ್ನು ತುಂಬದೇ ಕಾಲಹರಣ ಮಾಡಿದ್ದಾರೆ. ಇದರಿಂದ ಮಠದ ಭಕ್ತರಿಗೂ ನೋವಾಗಿದೆ ಎಂದರು.

ತಮ್ಮ ಕುಟುಂಬ ಸೋದೆ ಮಠಕ್ಕೆ ಮೂವರು ಸ್ವಾಮೀಜಿಗಳನ್ನೂ, ಶೀರೂರು ಮಠಕ್ಕೆ ಮೂವರು ಸ್ವಾಮೀಜಿಗಳನ್ನು ನೀಡಿದೆ. ಮಠದಿಂದ ನಮಗೇನೂ ಆಗಬೇಕಿಲ್ಲ. 3-4 ತಿಂಗಳಲ್ಲಿ ಶೀರೂರು ಮಠಕ್ಕೆ ಸಮರ್ಥ ಉತ್ತರಾಧಿಕಾರಿಯನ್ನು ನೇಮಿಸುವ ನಿರೀಕ್ಷೆಯೊಂದಿಗೆ ನಾವು ಯಾವುದೇ ಪ್ರತಿರೋಧ ತೋರದೇ ಮಠವನ್ನು ತೊರೆದಿದ್ದೆವು. ಆದರೆ ಮ್ಮ ನಿರೀಕ್ಷೆ ಹುಸಿಯಾಗಿದೆ ಎಂದರು.

ಅಷ್ಟಮಠಗಳ ಪರಂಪರೆಯಲ್ಲಿ ಒಂದು ಮಠದ ಸ್ವಾಮೀಜಿ, ಮತ್ತೊಂದು ಮಠದ ಸ್ವಾಮೀಜಿಯಾಗಲು ಸಾಧ್ಯವಿಲ್ಲ. ಆತ ಉತ್ತರಾಧಿಕಾರಿ ಬರುವವರೆಗೆ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಬಹುದು. ಆದರೆ ಸೋದೆ ಮಠಾಧೀಶರು ತಾವೇ ಶೀರೂರು ಮಠದ ಸ್ವಾಮೀಜಿ ಎಂದು ಹೇಳುತಿದ್ದಾರೆ. ಇದು ತಪ್ಪು ಎಂದು ಲಾತವ್ಯ ಹಾಗೂ ವಾದಿರಾಜ ಆಚಾರ್ಯ ಸಹೋದರರು ತಿಳಿಸಿದರು.

ಪ್ರಹ್ಲಾದ ಆಚಾರ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News