ಖಾಸಗಿತನ ವ್ಯವಸ್ಥೆಯ ಸುಧಾರಣೆ: ಫೇಸ್ಬುಕ್ ಬಳಕೆದಾರರಿಗೆ ಸೈಬರ್ ಭದ್ರತೆ ಏಜೆನ್ಸಿ ಸಲಹೆ

Update: 2021-04-20 18:17 GMT

ಹೊಸದಿಲ್ಲಿ, ಎ.20: ಸಾಮಾಜಿಕ ಮಾಧ್ಯಮ ಫೇಸ್ಬುಕ್ ಜಾಗತಿಕ ಮಟ್ಟದಲ್ಲಿ ನಡೆಸಿದ ಡೇಟಾ ಸ್ಕ್ರಾಪಿಂಗ್ ಉಪಕ್ರಮವು 61 ಲಕ್ಷ ಭಾರತೀಯರ ಮೇಲೆ ಪರಿಣಾಮ ಬೀರಿರುವುದರಿಂದ ಬಳಕೆದಾರರು ತಮ್ಮ ಖಾತೆಯ ಖಾಸಗಿತನ ವ್ಯವಸ್ಥೆಯನ್ನು ಸದೃಢಗೊಳಿಸುವಂತೆ ಭಾರತದ ಸೈಬರ್ ಭದ್ರತೆ ಏಜೆನ್ಸಿ ಸಿಇಆರ್ಟಿ-ಇನ್ ಸಲಹೆ ನೀಡಿದೆ.

ಇನ್ನೊಂದು ಕ್ರಮವಿಧಿ(ಕಂಪ್ಯೂಟರ್ ಪ್ರೋಗ್ರಾಂ)ಯಿಂದ ಬರುವ ಮಾನವ ಓದಬಲ್ಲ ಅಂಶಗಳನ್ನು ಕಂಪ್ಯೂಟರ್ ಪ್ರೋಗ್ರಾಂ ಬಳಸಿ ಹೊರತೆಗೆಯುವ ವಿಧಾನವನ್ನು ಡೇಟಾ ಸ್ಕ್ರಾಪಿಂಗ್ ಎಂದು ಕರೆಯಲಾಗುತ್ತದೆ.

ಫೇಸ್ಬುಕ್ ವೇದಿಕೆ ಬೆಳೆಯುತ್ತಿರುವಂತೆಯೇ, ನಿಮ್ಮ ಖಾತೆಯ ಕೆಲವು ವಿವರಗಳು ಬಹಿರಂಗವಾಗಬಹುದು. ನಿಮಗೆ ಅರಿವೇ ಆಗದ ರೀತಿಯಲ್ಲಿ ನಿಮ್ಮ ಖಾತೆಯ ವಿವರಗಳು ಬೇರೆಡೆ ಸಂಗ್ರಹವಾಗಿ ಹಂಚಿಕೆಯಾಗಬಹುದು ಎಂದು ಭಾರತದ ಕಂಪ್ಯೂಟರ್ ತುರ್ತು ಕಾರ್ಯಪಡೆ ಸಿಇಆರ್ಟಿ-ಇನ್ ಸೋಮವಾರ ಬಿಡುಗಡೆಗೊಳಿಸಿದ ಸಲಹೆಯಲ್ಲಿ ಉಲ್ಲೇಖಿಸಿದೆ.

ಇ-ಮೇಲ್ ವಿಳಾಸ, ಪ್ರೊಫೈಲ್ ಐಡಿ, ಪೂರ್ಣ ಹೆಸರು, ಉದ್ಯೋಗ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಸಹಿತ ಫೇಸ್ಬುಕ್ನ ಮಾಹಿತಿ ಜಾಗತಿಕವಾಗಿ ವ್ಯಾಪಕ ಮಟ್ಟದಲ್ಲಿ ಸೋರಿಕೆಯಾಗುತ್ತಿರುವ ವರದಿಯಾಗಿದೆ. ಆರ್ಥಿಕ ವ್ಯವಹಾರದ ವಿವರ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಅಥವಾ ಪಾಸ್ವರ್ಡ್ಗಳ ಮಾಹಿತಿ ಸೋರಿಕೆಯಾಗಿಲ್ಲ. ಆದರೆ ಸುಮಾರು 61 ಲಕ್ಷ ಭಾರತೀಯರ ಸಹಿತ 450 ಮಿಲಿಯನ್ ಬಳಕೆದಾರರ ಮಾಹಿತಿ ಸೈಬರ್ ಕ್ರಿಮಿನಲ್ಗಳ ವೇದಿಕೆಯಲ್ಲಿ ಬಹಿರಂಗಗೊಂಡಿದೆ ಎಂದು ಫೇಸ್ಬುಕ್ ಸಂಸ್ಥೆ ದೃಢಪಡಿಸಿದೆ.

ಫೇಸ್ಬುಕ್ನಲ್ಲಿ ಅಳವಡಿಸಿರುವ ‘ಕಾಂಟ್ಯಾಕ್ಟ್ ಇಂಪೋರ್ಟರ್’ ವ್ಯವಸ್ಥೆಯನ್ನು ಬಳಸಿ ಬಳಕೆದಾರರು ಇತರ ಬಳಕೆದಾರರ ಫೋನ್ ನಂಬರ್ ಬಳಸಿ ಅವರ ಕುರಿತ ಮಾಹಿತಿ ಪಡೆಯಲು ಸಾಧ್ಯವಾಗಿದೆ ಎಂದು ಫೇಸ್ಬುಕ್ ಸಂಸ್ಥೆ ಪ್ರತಿಪಾದಿಸಿದೆ. ಈ ಹಿನ್ನೆಲೆಯಲ್ಲಿ 2019ರ ಸೆಪ್ಟೆಂಬರ್ನಲ್ಲಿ ‘ಕಾಂಟ್ಯಾಕ್ಟ್ ಇಂಪೋರ್ಟರ್’ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ. ಆದರೆ ಈ ವೇಳೆಗಾಗಲೇ 450 ಮಿಲಿಯನ್ ಜಾಗತಿಕ ಬಳಕೆದಾರರ ಫೋನ್ ನಂಬರ್ ಹ್ಯಾಕರ್ಗಳಿಗೆ , ಸೈಬರ್ ಕ್ರಿಮಿನಲ್ಗಳಿಗೆ ಲಭ್ಯವಾಗಿದೆ ಎಂದು ಸಿಇಆರ್ಟಿ-ಇನ್ ಹೇಳಿದೆ.

ಸೈಬರ್ ಕ್ರಿಮಿನಲ್ಗಳು ಸ್ವಯಂಚಾಲಿತ ಸಾಫ್ಟ್ವೇರ್ ಅಥವಾ ವ್ಯವಸ್ಥೆ ಬಳಸಿ ಮಾಹಿತಿ ಕದಿಯಬಹುದು ಮತ್ತು ಇದನ್ನು ಅನಪೇಕ್ಷಿತ ಕೆಲಸಗಳಿಗೆ ಬಳಸಬಹುದು. ಈ ಮಾಹಿತಿಯನ್ನು ಮತ್ತೊಬ್ಬ ಸೈಬರ್ ಕ್ರಿಮಿನಲ್ಗೆ , ಕಾಲ್ಸೆಂಟರ್ಗಳಿಗೆ ಅಥವಾ ಮಾರ್ಕೆಟಿಂಗ್ ಸಂಸ್ಥೆಗಳಿಗೆ ರವಾನಿಸಬಹುದು. ಆದ್ದರಿಂದ ಬಳಕೆದಾರರು ತಾವು ಯಾವ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಬಯಸುತ್ತೇವೆ ಮತ್ತು ತಮ್ಮ ಫೋನ್ ನಂಬರ್ ಮೂಲಕ ಯಾರನ್ನು ಸಂಪರ್ಕಿಸಲು ಬಯಸುತ್ತೇವೆ ಎಂದು ವಿವರಿಸುವ 2ಎಫ್ಎ(2 ಅಂಶಗಳ ದೃಢೀಕರಣ) ವ್ಯವಸ್ಥೆಯನ್ನು ತಮ್ಮ ಖಾತೆಯಲ್ಲಿ ಅಳವಡಿಸಬೇಕು. ಮತ್ತು ತಮ್ಮ ಪ್ರೊಫೈಲ್ ಸೆಟ್ಟಿಂಗ್ ಅನ್ನು ‘ಖಾಸಗಿ’ ಅಥವಾ ‘ಸ್ನೇಹಿತರಿಗೆ ಮಾತ್ರ’ ಎಂದು ಬದಲಾಯಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News