ಅಸ್ಸಾಂ: ಒಎನ್‍ಜಿಸಿಯ ಮೂವರ ನೌಕರರ ಅಪಹರಣ

Update: 2021-04-21 06:18 GMT

ಗುವಾಹಟಿ: ತೈಲ ಹಾಗೂ ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್(ಒಎನ್ ಜಿಸಿ)ಯ ಮೂವರು ನೌಕರರನ್ನು ಬುಧವಾರ ಮುಂಜಾನೆ ಅಸ್ಸಾಂನ ಶಿವಸಾಗರ ಜಿಲ್ಲೆಯ ಲಕ್ವಾ ಪ್ರದೇಶದಿಂದ ಅಪಹರಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ. 

ನಿಷೇಧಿತ ಉಗ್ರ ಸಂಘಟನೆಯಾದ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್(ಇಂಡಿಪೆಂಡೆಂಟ್)(ಉಲ್ಫಾ-ಐ)ಅಪಹರಣದ ಹಿಂದಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಒಎನ್ ಜಿಸಿಗೆ ಸೇರಿದ ವಾಹನದಲ್ಲಿ ಅಪರಿಚಿತ ಸಶಸ್ತ್ರ ದುಷ್ಕರ್ಮಿಗಳು ನೌಕರರನ್ನು ಕರೆದೊಯ್ದಿದ್ದಾರೆ. ನಂತರ ವಾಹನವನ್ನು ಅಸ್ಸಾಂ-ನಾಗಾಲ್ಯಾಂಡ್ ಗಡಿಯ ಸಮೀಪವಿರುವ ನಿಮೊನಾಗಢ ಅರಣ್ಯದಲ್ಲಿ ಬಿಟ್ಟುಹೋಗಿದ್ದಾರೆ ಎಂದು ಬುಧವಾರ ಬೆಳಗ್ಗೆ ಒಎನ್ ಜಿಸಿ ಸರಣಿ ಟ್ವೀಟ್  ನಲ್ಲಿ ತಿಳಿಸಿದೆ.
 

ಅಪಹರಿಸಲ್ಪಟ್ಟಿರುವ  ಎಲ್ಲ ಮೂವರು ನೌಕರರು ಸ್ಥಳೀಯ ನಿವಾಸಿಗಳಾಗಿದ್ದಾರೆ. ನಾಗಾಲ್ಯಾಂಡ್  ನ ಭದ್ರತಾ ಏಜೆನ್ಸಿಗಳು ಎಚ್ಚರವಾಗಿರುವಂತೆ ಕೇಳಿಕೊಂಡಿದ್ದೇವೆ. ನಾಗಾಲ್ಯಾಂಡ್ ಗಡಿಯ ಸಮೀಪ ವಾಹನವನ್ನು ಬಿಟ್ಟುಹೋಗಲಾಗಿದೆ. ನಾಗಾಲ್ಯಾಂಡ್ ನ ಮೋನ್  ಜಿಲ್ಲೆಯ ಪೊಲೀಸರನ್ನು ಸಹ ಸಕ್ರಿಯಗೊಳಿಸಲಾಗಿದೆ ಎಂದು  ಶಿವಸಾಗರ ಜಿಲ್ಲಾ ಎಸ್ಪಿ ಅಮಿತ್ ಸಿನ್ಹಾ ಹೇಳಿದ್ದಾರೆ.

ಅಪಹೃತ ಮೂವರು ನೌಕರರನ್ನು ಶಿವಸಾಗರ ಜಿಲ್ಲೆಯ ಮೋಹಿನಿ ಮೋಹನ್ ಗೋಗೊಯ್(ಕಿರಿಯ ತಂತ್ರಜ್ಞ, ಉತ್ಪಾದನೆ), ಜೋರ್ಹತ್ ಜಿಲ್ಲೆಯ ಅಲೋಕೇಶ್ ಸೈಕಿಯಾ(ಸಹಾಯಕ ಜೂನಿಯರ್ ಇಂಜಿನಿಯರ್, ಉತ್ಪಾದನೆ) ಹಾಗೂ ಗೋಲಘಾಟ್ ಜಿಲ್ಲೆಯ ರಿತುಲ್ ಸೈಕಿಯಾ(ಉತ್ಪಾದನಾ ಸಹಾಯಕ ಜೂ.ಇಂಜಿನಿಯರ್ )ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News