ಮಹಾರಾಷ್ಟ್ರ: ಆಸ್ಪತ್ರೆಯ ಹೊರಗೆ ಟ್ಯಾಂಕರ್ ನಿಂದ ಆಕ್ಸಿಜನ್ ಸೋರಿಕೆ, 22 ಕೋವಿಡ್ ರೋಗಿಗಳು ಮೃತ್ಯು

Update: 2021-04-21 16:35 GMT
Photo: Twitter(@ani)

ನಾಸಿಕ್(ಮಹಾರಾಷ್ಟ್ರ),ಎ.21: ಇಲ್ಲಿಯ ಝಾಕಿರ್ ಹುಸೇನ್ ಆಸ್ಪತ್ರೆಯ ಹೊರ ಆವರಣದಲ್ಲಿಯ ಟ್ಯಾಂಕ್‌ನಿಂದ ಬುಧವಾರ ನಸುಕಿನಲ್ಲಿ ಆಮ್ಲಜನಕ ಸೋರಿಕೆಯುಂಟಾಗಿ ಕನಿಷ್ಠ 22 ಕೋವಿಡ್-19 ರೋಗಿಗಳು ದಾರುಣ ಸಾವನ್ನಪ್ಪಿದ್ದಾರೆ.

 ಸೋರಿಕೆಯಿಂದಾಗಿ ಆಮ್ಲಜನಕ ಪೂರೈಕೆಯು ಸುಮಾರು 30 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ಎಲ್ಲ ರೋಗಿಗಳು ವೆಂಟಿಲೇಟರ್‌ಗಳಲ್ಲಿದ್ದರು ಮತ್ತು ನಿರಂತರ ಆಮ್ಲಜನಕ ಪೂರೈಕೆ ಅಗತ್ಯವಾಗಿತ್ತು. ನಾಸಿಕ್ ಮಹಾನಗರ ಪಾಲಿಕೆ ಅಧೀನದ ಝಾಕಿರ್ ಹುಸೇನ್ ಆಸ್ಪತ್ರೆಯು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿಯೋಜಿತಗೊಂಡಿದೆ.

ಸದ್ಯದ ಮಾಹಿತಿಯಂತೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯದಿಂದಾಗಿ 22 ರೋಗಿಗಳು ಮೃತಪಟ್ಟಿದ್ದಾರೆ. ಮಹಾನಗರ ಪಾಲಿಕೆಯು ತಕ್ಷಣವೇ ಆಮ್ಲಜನಕಕ್ಕೆ ಹೆಚ್ಚಿನ ಬೇಡಿಕೆಯಿಲ್ಲದ ಇತರ ಆಸ್ಪತ್ರೆಗಳಿಂದ ಆಮ್ಲಜನಕ ಸಿಲಿಂಡರ್‌ಗಳನ್ನು ಝಾಕಿರ್ ಹುಸೇನ್ ಆಸ್ಪತ್ರೆಗೆ ಸ್ಥಳಾಂತರಿಸಿದೆ ಎಂದು ಜಿಲ್ಲಾಧಿಕಾರಿ ಸೂರಜ್ ಮಾಂಢರೆ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ದುರಂತದ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ್ದ ಶಿವಸೇನೆ ನಾಯಕ ಸುಧಾಕರ ಬಡಗುಜರ್ ಅವರು,ಸಾವುಗಳ ಸಂಖ್ಯೆ 30-35ಕ್ಕೆ ಏರುವ ಭೀತಿಯನ್ನು ವ್ಯಕ್ತಪಡಿಸಿದರು. ಅಗ್ನಿಶಾಮಕ ದಳ ಮತ್ತು ತಂತ್ರಜ್ಞರ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ಆಮ್ಲಜನಕದ ಅಗತ್ಯವಿರುವ 80 ರೋಗಿಗಳ ಪೈಕಿ 31 ಜನರನ್ನು ಝಾಕಿರ್ ಹುಸೇನ್ ಆಸ್ಪತ್ರೆಯಿಂದ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.

ಬಿಳಿಯ ಹೊಗೆಯ ರೂಪದಲ್ಲಿ ಆಮ್ಲಜನಕ ಸೋರಿಕೆಯು ಸುತ್ತುಮತ್ತಲಿನ ಪ್ರದೇಶಗಳಿಗೆ ವ್ಯಾಪಿಸುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳು ತೋರಿಸಿವೆ. ದೇಶದಲ್ಲಿ ತೀವ್ರ ಕೋರೋನವೈರಸ್ ಪೀಡಿತ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಆಮ್ಲಜನಕ ಪೂರೈಕೆಯ ಕೊರತೆಯ ಬಗ್ಗೆ ಹಾಹಾಕಾರವೆದ್ದಿರುವ ಸಮಯದಲ್ಲಿಯೇ ಈ ಅವಘಡ ಸಂಭವಿಸಿದೆ.

ಘಟನೆಯ ಬಗ್ಗೆ ತನಿಖೆಯನ್ನು ನಡೆಸುವುದಾಗಿ ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ ಟೋಪೆ ಅವರು,ಈ ರೋಗಿಗಳಿಗೆ ಆಮ್ಲಜನಕವನ್ನು ಪೂರೈಸುತ್ತಿದ್ದ ಟ್ಯಾಂಕ್‌ನಲ್ಲಿ ಸೋರಿಕೆ ಪತ್ತೆಯಾಗಿದೆ ಎಂದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ನಾಸಿಕ್ ಮಹಾನಗರ ಪಾಲಿಕೆಯು ತನಗೆ ಮಾಹಿತಿ ನೀಡಿದ್ದು,ತಾನು ಅಲ್ಲಿಗೆ ತೆರಳುತ್ತಿರುವುದಾಗಿ ಅವರು ತಿಳಿಸಿದರು.

ನಾಸಿಕ್ ಉಸ್ತುವಾರಿ ಸಚಿವ ಛಗನ್ ಭುಜಬಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು,ಮೃತರ ಕುಟುಂಬಗಳಿಗೆ ಸಂತಾಪಗಳನ್ನು ಸೂಚಿಸಿದ್ದಾರೆ.

ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿದ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಅವರು,ಈ ಬಗ್ಗೆ ವಿಚಾರಣೆ ನಡೆಸುವ ಭರವಸೆಯನ್ನು ನೀಡಿದರು.

ಕೋವಿಡ್-19 ರೋಗಿಗಳ ಸಾವುಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ಔಷಧಿ ನಿಯಂತ್ರಣ ಸಚಿವ ರಾಜೇಂದ್ರ ಶಿಂಗಾಣೆ ತಿಳಿಸಿದರು.

ನಾಸಿಕ್‌ನ ಆಸ್ಪತ್ರೆಯಲ್ಲಿ ಆಮ್ಲಜನಕ ಸೋರಿಕೆಯಿಂದ ಸಂಭವಿಸಿರುವ ಅವಘಡವು ತೀವ್ರ ನೋವನ್ನುಂಟು ಮಾಡಿದೆ. ಅದರಿಂದಾಗಿ ಜೀವಹಾನಿಯು ದುಖಃದಾಯಕವಾಗಿದ್ದು, ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು.

ಪ್ರಧಾನಿ ನರೇಂದ್ರ ಮೋದಿ

***

ನಾಸಿಕ್‌ನ ಆಸ್ಪತ್ರೆಯಲ್ಲಿ ಆಮ್ಲಜನಕ ಸೋರಿಕೆಯಿಂದ ಉಂಟಾಗಿರುವ ದುರಂತವು ನನ್ನನ್ನು ಹತಾಶನನ್ನಾಗಿಸಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ನನ್ನ ಗಾಢ ಸಂತಾಪಗಳು. ಇತರ ಎಲ್ಲ ರೋಗಿಗಳ ಚೇತರಿಕೆಗಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ.

ಅಮಿತ್ ಶಾ ಕೇಂದ್ರ ಗೃಹಸಚಿವ

****

 ನನ್ನ ದುಖಃವನ್ನು ಶಬ್ದಗಳಿಂದ ಬಣ್ಣಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಕೋವಿಡ್-19 ರೋಗಿಯನ್ನು ಉಳಿಸಲು ನಾವು ತೀವ್ರ ಪ್ರಯತ್ನಗಳನ್ನು ಮಾಡುತ್ತಿರುವಾಗ ಇಂತಹ ಘಟನೆಗಳು ವಿನಾಶಕಾರಿಯಾಗಿವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಹೇಗೆ ಸಾಂತ್ವನಗೊಳಿಸುವುದು ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ಇದೊಂದು ಆಕಸ್ಮಿಕವಾಗಿದ್ದರೂ ಈ ಬಗ್ಗೆ ವಿವರವಾದ ತನಿಖೆಯನ್ನು ನಡೆಸಲಾಗುವುದು.

ಉದ್ಧವ್ ಠಾಕ್ರೆ- ಮಹಾರಾಷ್ಟ್ರ ಮುಖ್ಯಮಂತ್ರಿ

***

ನಾಸಿಕ್‌ನ ಝಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಅತ್ಯಂತ ದುಖಃದಾಯಕವಾಗಿದೆ. ಶೋಕತಪ್ತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು

 ರಾಹುಲ್ ಗಾಂಧಿ - ಕಾಂಗ್ರೆಸ್ ನಾಯಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News