ಕೋವಿಡ್-19 ಲಸಿಕೆಯನ್ನು ಉಚಿತವಾಗಿ ಒದಗಿಸುವಂತೆ ಕೋರಿ ಪ್ರಧಾನಿ ಮೋದಿಗೆ ಕೇರಳ ಮುಖ್ಯಮಂತ್ರಿ ಪತ್ರ

Update: 2021-04-21 14:57 GMT

ತಿರುವನಂತಪುರ,ಎ.21: ನೂತನ ಕೊರೋನವೈರಸ್ ಲಸಿಕೆ ವಿತರಣೆ ನೀತಿಯನ್ನು ಪುನರ್‌ಪರಿಶೀಲಿಸುವಂತೆ ಮತ್ತು ರಾಜ್ಯ ಸರಕಾರಗಳಿಗೆ ಅಗತ್ಯ ಲಸಿಕೆಗಳನ್ನು ಉಚಿತವಾಗಿ ಒದಗಿಸುವಂತೆ ಕೋರಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ.

ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ನೀಡಲಾಗುವುದು ಎಂದು ಸೋಮವಾರ ಪ್ರಕಟಿಸಿದ್ದ ಸರಕಾರವು,ಲಸಿಕೆ ಅಭಿಯಾನದ ಮೂರನೇ ಹಂತದಲ್ಲಿ ಲಸಿಕೆ ತಯಾರಿಕೆ ಕಂಪನಿಗಳು ಕೇಂದ್ರೀಯ ಔಷಧಿ ಪ್ರಯೋಗಾಲಯವು ಬಿಡುಗಡೆಗೊಳಿಸುವ ತಮ್ಮ ಮಾಸಿಕ ಉತ್ಪಾದನೆಯ ಶೇ.50ರಷ್ಟನ್ನು ಕೇಂದ್ರಕ್ಕೆ ಪೂರೈಸಬೇಕು ಮತ್ತು ಉಳಿದ ಶೇ.50ರಷ್ಟು ಡೋಸ್‌ಗಳನ್ನು ರಾಜ್ಯ ಸರಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎಂದು ಹೇಳಿತ್ತು. ತಯಾರಕರಿಂದ ಲಸಿಕೆಗಳನ್ನು ಪಡೆಯುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಮಂಗಳವಾರ ಬರೆದಿರುವ ತನ್ನ ಪತ್ರದಲ್ಲಿ ತಿಳಿಸಿರುವ ವಿಜಯನ್,ಸಾಂಕ್ರಾಮಿಕದಿಂದಾಗಿ ರಾಜ್ಯ ಸರಕಾರಗಳು ಈಗಾಗಲೇ ಹೆಚ್ಚುವರಿ ಹಣಕಾಸು ಹೊರೆಯನ್ನು ಎದುರಿಸುತ್ತಿವೆ. ಲಸಿಕೆಗಳನ್ನು ಖರೀದಿಸುವ ಹೆಚ್ಚುವರಿ ಹೊರೆಯು ಅವುಗಳ ಆರ್ಥಿಕತೆಯ ಮೇಲೆ ತೀವ್ರ ಒತ್ತಡವನ್ನುಂಟು ಮಾಡಲಿದೆ ಎಂದಿದ್ದಾರೆ. ಕೇಂದ್ರವು ತನ್ನ ಕೋಟಾದಿಂದ ರಾಜ್ಯಗಳಿಗೆ ಉಚಿತವಾಗಿ ಲಸಿಕೆಗಳನ್ನು ಒದಗಿಸಲಿದೆ ಎಂದು ನೂತನ ವಿತರಣೆ ನೀತಿಯಲ್ಲಿ ಹೇಳಲಾಗಿದ್ದರೂ,ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆಗಳ ಖರೀದಿಗಾಗಿ ಅವು ಇತರರೊಂದಿಗೆ ಸ್ಪರ್ಧೆಗಿಳಿಯಬೇಕಾದ ಅನಿವಾರ್ಯತೆಗೆ ಸಿಲುಕಿಸುವುದಿಲ್ಲ ಎಂಬ ಮರುಭರವಸೆಯು ರಾಜ್ಯಗಳಿಗೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯಗಳು ಆರೋಗ್ಯ ಕ್ಷೇತ್ರದಲ್ಲಿ ಸಾಂವಿಧಾನಿಕ ಬದ್ಧತೆಯನ್ನು ಹೊಂದಿವೆ ಮತ್ತು ಸಾಂಕ್ರಾಮಿಕ ಸಂದರ್ಭದಲ್ಲಿ ಉಚಿತವಾಗಿ ಒದಗಿಸಲು ಲಸಿಕೆಗಳಿಗೆ ಖಾತರಿ ಕೋಟಾ ಅವುಗಳಿಗೆ ಅಗತ್ಯವಾಗಿದೆ ಎಂದು ವಿಜಯನ್ ಪತ್ರದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News