ಲಸಿಕೆ ಹಾಕಿಸಿಕೊಂಡವರಿಗೆ ಕೊರೋನ ಮರುಕಳಿಸಿರುವುದು ತುಂಬಾ ಕಡಿಮೆ: ಕೇಂದ್ರ

Update: 2021-04-21 17:58 GMT

ಮುಂಬೈ, ಎ. 19: ಲಸಿಕೆ ಹಾಕಿಸಿಕೊಂಡ ಬಳಿಕ ಮತ್ತೆ ಸೋಂಕಿಗೊಳಗಾದವರ ಸಂಖ್ಯೆ ಅತೀ ಕಡಿಮೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ದತ್ತಾಂಶ ಹೇಳಿದೆ. ‘‘ಲಸಿಕೆ ಹಾಕಿಸಿಕೊಂಡ 10 ಸಾವಿರ ಜನರಲ್ಲಿ ಕೇವಲ ಶೇ. 2ರಿಂದ 4 ಜನರಿಗೆ ಮಾತ್ರ ಮತ್ತೆ ಕೊರೋನ ಸೋಂಕು ತಗುಲಿದೆ. ಇದು ತುಂಬಾ ಕಡಿಮೆ ಸಂಖ್ಯೆ. ಆದುದರಿಂದ ಆತಂಕಪಟ್ಟುಕೊಳ್ಳಬೇಕಾಗಿಲ್ಲ’’ ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ ನಿರ್ದೇಶಕ ಬಲರಾಮ್ ಭಾರ್ಗವ ಬುಧವಾರ ಹೇಳಿದ್ದಾರೆ.

ಭಾರತದಲ್ಲಿ ತಯಾರಿಸಿದ ಭಾರತ್ ಬಯೋಟೆಕ್‌ನ ಮೊದಲ ಡೋಸ್ ಪಡೆದುಕೊಂಡವರಲ್ಲಿ ಕೇವಲ ಶೇ. 0.04 ಜನರಿಗೆ ಮಾತ್ರ ಕೊರೋನ ಸೋಂಕು ಮತ್ತೆ ತಗಲಿದೆ. ಕೊವ್ಯಾಕ್ಸಿನ್‌ನ ಮೊದಲ ಡೋಸ್ ಪಡೆದುಕೊಂಡ 93,56,436 ಜನರಲ್ಲಿ 4,208 ಜನರಿಗೆ ಮಾತ್ರ ಕೊರೋನ ಸೋಂಕು ಮತ್ತೆ ತಗುಲಿದೆ. ಅದೇ ರೀತಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡ 17,37,178 ಜನರಲ್ಲಿ ಕೇವಲ 695 ಜನರಿಗೆ ಮತ್ತೆ ಕೊರೋನ ಸೋಂಕು ತಗುಲಿದೆ ಎಂದು ಅವರು ತಿಳಿಸಿದ್ದಾರೆ.

ಆಕ್ಸ್‌ಫರ್ಡ್-ಆಸ್ಟ್ರಾಝೆನೆಕಾ ಅಭಿವೃದ್ಧಿಪಡಿಸಿದ ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡವರಲ್ಲಿ ಕೊರೋನ ಸೋಂಕು ಮತ್ತೆ ತಗುಲಿರುವುದು ಇದಕ್ಕಿಂತಲೂ ಕಡಿಮೆ. ಮೊದಲ ಡೋಸ್ ಪಡೆದುಕೊಂಡ 10,03,02,745 ಜನರಲ್ಲಿ ಕೇವಲ 14,145 ಜನರಿಗೆ ಮಾತ್ರ ಮತ್ತೆ ಕೊರೋನ ಸೋಂಕು ತಗುಲಿದೆ. ಇದು ಶೇ. 0.002. ಎರಡನೇ ಡೋಸ್ ಪಡೆದುಕೊಂಡ 1,57,32,754 ಜನರಲ್ಲಿ 5,014 ಜನರಿಗೆ ಮಾತ್ರ ಮತ್ತೆ ಕೊರೋನ ಸೋಂಕಿತರಾಗಿದ್ದಾರೆ. ಇದು ಶೇ. 0.003 ಎಂದು ಅವರು ಹೇಳಿದ್ದಾರೆ. ಈ ಸಂಖ್ಯೆ ಕೊರೋನ ಲಸಿಕೆ ಸುರಕ್ಷಿತ ಎಂಬುದನ್ನು ಸಾಬೀತುಪಡಿಸಿದೆ. ಆದುದರಿಂದ ಕೊರೋನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಹೆಚ್ಚೆಚ್ಚು ಜನರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಕೇಂದ್ರ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News