ಎ.24ರಂದು ಮಂಗಳೂರು, ಎ.25 ಉಡುಪಿಯಲ್ಲಿ ಶೂನ್ಯ ನೆರಳಿನ ದಿನ

Update: 2021-04-22 13:15 GMT

ಉಡುಪಿ, ಎ.22: ಮುಂಬರುವ ದಿನಗಳಲ್ಲಿ ಸೂರ್ಯನು ಆಕಾಶದಲ್ಲಿ ಉತ್ತರ ದಿಕ್ಕಿನತ್ತ ಚಲಿಸುವಾಗ, ನೀವು ಇರುವ ಸ್ಥಳಕ್ಕೆ ಅವಲಂಬಿತವಾಗಿ ಸೂರ್ಯನು ಖಮಧ್ಯದ (Zenith) ಮೂಲಕ ಅಂದರೆ ನೆತ್ತಿಯ ನೇರದಲ್ಲಿ ಹಾದು ಹೋಗುತ್ತಾನೆ. ನೀವು ನಿಂತಿರುವ ಸ್ಥಳದಿಂದ ನೆತ್ತಿಯ ಮೇಲಿರುವ ಬಿಂದುವನ್ನು ಖಮಧ್ಯ ಎನ್ನುತ್ತಾರೆ . ಭೂಮಿಯು ಗೋಳಾಕಾರದಲ್ಲಿರುವುದರಿಂದ ಈ ಬಿಂದುವು ಆಕಾಶಕ್ಕೆ ಸಂಬಂಧಿಸಿದಂತೆ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ.

ಬೇರೆ ಯಾವುದೇ ಸಮಯದಲ್ಲಿ ಸೂರ್ಯನು ನಿಮ್ಮನ್ನು ಒಂದು ಕೋನದಲ್ಲಿ ಎದುರಿಸುತ್ತಿದ್ದರೆ, ನಿಮ್ಮ ನೆರಳು ನಿಮ್ಮ ಸುತ್ತಲಿನ ನೆಲದ ಮೇಲೆ ಬೀಳುತ್ತದೆ. ಸೂರ್ಯನು ಆಕಾಶದಲ್ಲಿ ಮೇಲೇರುತ್ತಿದ್ದಂತೆ , ನೆರಳಿನ ಉದ್ದವು ಕಡಿಮೆಯಾಗುತ್ತದೆ ಮತ್ತು ಈ ದಿನ, ಸೂರ್ಯನು ನಿಮ್ಮ ತಲೆಯ ಮೇಲೆ ನಿಖರವಾಗಿ ಇರುವಾಗ, ನಿಮ್ಮ ನೆರಳು ನೇರವಾಗಿ ನಿಮ್ಮ ಕೆಳಗಿರುತ್ತದೆ. ನೀವು ನಿಮ್ಮ ನೆರಳಿನ ಮೇಲೆಯೇ ನಿಂತಿರುವುದರಿಂದ ಈ ನೆರಳು ನಿಮಗೆ ಗೋಚರಿಸುವುದಿಲ್ಲ ಅಥವಾ ಇದನ್ನು ಶೂನ್ಯ ನೆರಳು ಎನ್ನಲಾಗುತ್ತದೆ.

ಭೂಮಿಯು 23.5 ಡಿಗ್ರಿ ಕೋನದಲ್ಲಿ ಬಾಗಿರುವುದರಿಂದ , ಭೂಮಿಯು ಸೂರ್ಯನ ಸುತ್ತ ಚಲಿಸುವಾಗ, ಸೂರ್ಯನು ಉತ್ತರ ದಿಂದ ದಕ್ಷಿಣಕ್ಕೆ ಚಲಿಸುವಂತೆ ಕಾಣುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗು ಮಕರ ಸಂಕ್ರಾಂತಿ ವೃತ್ತದ ನಡುವೆ ವಾಸಿಸುವ ಎಲ್ಲ ಜನರಿಗೆ ವರ್ಷದ ಎರಡು ದಿನಗಳಲ್ಲಿ ಸೂರ್ಯನು ಉತ್ತುಂಗದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಎರಡು ದಿನಗಳು ಪ್ರತಿ ವರ್ಷ ಏಪ್ರಿಲ್-ಮೇ ಮತ್ತು ಆಗಸ್ಟ್‌ನಲ್ಲಿ ಸಂಭವಿಸುತ್ತವೆ. ಆಗಸ್ಟ್ ತಿಂಗಳು ಮಳೆಗಾಲವಾಗಿದ್ದರಿಂದ, ಬೇಸಿಗೆಗಾಲವಾದ ಎಪ್ರಿಲ್ ತಿಂಗಳಿನಲ್ಲಿ ಈ ಶೂನ್ಯ ನೆರಳಿನ ದಿನಗಳನ್ನು ನೋಡುವ ಸಾಧ್ಯತೆ ಹೆಚ್ಚಿರುತ್ತದೆ.

ಯಾವುದೇ ಉಪಕರಣಗಳನ್ನು ಬಳಸದೆ ಗಮನಿಸಬಹುದಾದ ಸುಲಭವಾದ ಖಗೋಳ ವಿದ್ಯಮಾನಗಳಲ್ಲಿ ಇದು ಒಂದು. ಮಂಗಳೂರಿನ ಜನರು ಎ.24ರಂದು ಅಪರಾಹ್ನ 12: 28ಕ್ಕೆ ಮತ್ತು ಉಡುಪಿಯಲ್ಲಿ ಜನತೆ ಮರುದಿನ ಎ.25ರಂದು ಅಪರಾಹ್ನ 12:29ಕ್ಕೆ ಶೂನ್ಯ ನೆರಳಿನ ವಿದ್ಯಮಾನವನ್ನು ವೀಕ್ಷಿಸಬಹುದು. ಬೆಂಗಳೂರಿನ ಜನರು ಈ ವಿದ್ಯಮಾನವನ್ನು ಎ.24ರಂದು ಅಪರಾಹ್ನ 12: 18ಕ್ಕೆ ಗಮನಿಸಬಹುದು. ರಾಜ್ಯದ ವಿವಿಧ ಭಾಗಗಳ ಜನರು ಎ.22ರಿಂದ ಮೇ 11ರ ನಡುವೆ ಬೇರೆ ಬೇರೆ ದಿನಗಳಲ್ಲಿ ಪೂರ್ವಕ್ಕೆ ಅಪರಾಹ್ನ 12:15 ರಿಂದ ಮತ್ತು ರಾಜ್ಯದ ಪಶ್ಚಿಮ ಭಾಗಗಳಿಗೆ ಅಪರಾಹ್ನ 12:35ರ ನಡುವೆ ಒಂದು ನಿಮಿಷದ ಈ ಶೂನ್ಯ ನೆರಳಿನ ವಿದ್ಯಾಮಾನವನ್ನು ಬರಿಗಣ್ಣಿನಲ್ಲೇ ವೀಕ್ಷಿಸಬಹುದು.

ಶೂನ್ಯ ನೆರಳನ್ನು ಗಮನಿಸಲು ವಸ್ತುವು ಸಿಲಿಂಡರ್, ಕ್ಯೂಬ್ ಅಥವಾ ಶಂಕುವಿನಂತೆ ಮೇಲಿನಿಂದ ಕೆಳಕ್ಕೆ ಸಮಾನ ಅಥವಾ ಹೆಚ್ಚುತ್ತಿರುವ ಅಗಲವನ್ನು ಹೊಂದಿರಬೇಕು. ಮನುಷ್ಯರ ದೇಹದ ಮೇಲ್ಭಾಗವು, ಕೆಳಭಾಗಕ್ಕಿಂತ ವಿಶಾಲವಾಗಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ನೆರಳನ್ನು ಉಂಟು ಮಾಡುತ್ತದೆ. ಹಾಗು ಇದು ಶೂನ್ಯ ನೆರಳಿನ ದಿನದಂದು ಅತ್ಯಲ್ಪ ಪ್ರಮಾಣದಲ್ಲಿ ಕಾಣುತ್ತದೆ.

ಈ ಸುಂದರ ಖಗೋಳ ವಿದ್ಯಮಾನವನ್ನು ಜನರು ವೀಕ್ಷಿಸಿ ಆನಂದಿಸಬೇಕೆಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಈ ಶೂನ್ಯ ನೆರಳಿನ ದಿನದ ನೇರ ಪ್ರಸಾರವನ್ನು ಮಾಡಲು ನಿಶ್ಚಯಿಸಿದ್ದು, ಮಂಗಳೂರಿನ ನೇರ ಪ್ರಸಾರವನ್ನು ನಮ್ಮ ಯೂ ಟ್ಯೂಬ್ ಚಾನಲ್‌ನಲ್ಲಿ ಹಾಗೂ ಉಡುಪಿಯ ನೇರ ಪ್ರಸಾರವನ್ನು ನಮ್ಮ ಫೇಸ್ಬುಕ್ ಪುಟದಲ್ಲಿ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ- https://paac.ppc.a.cin-ನ್ನು ಸಂಪರ್ಕಿಸುವಂತೆ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News