ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ 500 ಮಂದಿಗೆ ಮಾತ್ರ ಅವಕಾಶ: ಚುನಾವಣಾ ಆಯೋಗ

Update: 2021-04-22 17:54 GMT

ಕೋಲ್ಕತ್ತ: ಪಶ್ಚಿಮ ಬಂಗಾಳ ಚುನಾವಣೆಯ ಒಟ್ಟು ೮ ಹಂತಗಳಲ್ಲಿ 6 ಹಂತಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಉಳಿದ ಇನ್ನೆರಡು ಹಂತಗಳ ಚುನಾವಣೆಯಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ, ರ‍್ಯಾಲಿಗಳಿಗೆ ಮತ್ತು ಕಾಲ್ನಡಿಗೆ ಜಾಥಾಗಳಿಗೆ ಅನುಮತಿ ನೀಡುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಕೊಲ್ಕತ್ತದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಸೋಂಕು ಪ್ರಕರಣಗಳ ಕುರಿತು ಕೋಲ್ಕತ್ತ ಹೈಕೋರ್ಟ್‌ ಕ್ರಮ ಕೈಗೊಳ್ಳಲು ಆದೇಶ ನೀಡಿದ ಬೆನ್ನಲ್ಲೇ ಚುನಾವಣಾ ಆಯೋಗವು ಹೇಳಿಕೆ ಹೊರಡಿಸಿದೆ.

ರ‍್ಯಾಲಿಗಳು ಮತ್ತು ರೋಡ್‌ ಶೋಗಳ ಹಿಂದಿನ ಎಲ್ಲ ಆದೇಶಗಳನ್ನು ರದ್ದುಪಡಿಸಲಾಗಿದ್ದು, 500ಕ್ಕಿಂತ ಹೆಚ್ಚು ಜನರು ಭಾಗವಹಿಸದ ಸಭೆಗಳಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಕೊರೋನ ಸೋಕು ಪ್ರಥಮ ಬಾರಿಗೆ 10,000 ದಾಟಿತ್ತು. ಕಳೆದ 24 ಗಂಟೆಗಳಲ್ಲಿ 56 ಸಾವುಗಳೂ ಸಂಭವಿಸಿವೆ.

ಚುನಾವಣಾ ರ‍್ಯಾಲಿಗಳು ಸೂಪರ್‌ ಸ್ಪ್ರೆಡರ್‌ ಆಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದ ಕೋರ್ಟ್‌, ಕೂಡಲೇ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು. ಬಳಿಕ ತನ್ನ ಆದೇಶದಲ್ಲಿ ಚುನಾವಣಾ ಆಯೋಗವು "ಅನೇಕ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸಾರ್ವಜನಿಕ ಸಭೆಗಳಲ್ಲಿ ನಿಗದಿತ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂದು "ದುಃಖದಿಂದ" ಗಮನಿಸಿದ್ದೇವೆ. ಹಾಗಾಗಿ, ಕ್ರಮ ಜರುಗಿಸಿದ್ದೇವೆ" ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News