ಎಲ್ಲರಿಗೂ ಉಚಿತ ಲಸಿಕೆ ಒದಗಿಸಬೇಕು: ಅಶೋಕ್ ಗೆಹ್ಲೋಟ್ ಆಗ್ರಹ

Update: 2021-04-22 17:59 GMT

ಜೈಪುರ, ಎ.22: ಮೂರನೇ ಹಂತದ ಲಸಿಕೆ ಅಭಿಯಾನದಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ. ಆದರೆ ಲಸಿಕೆಯನ್ನು ಉಚಿತವಾಗಿ ಒದಗಿಸಬೇಕು ಎಂದು ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ.

ದೇಶದ ಪ್ರಜೆಗಳಿಗೆ ಲಸಿಕೆ ಒದಗಿಸುವಾಗ ಏಕರೀತಿಯ ನೀತಿ ಇರಬೇಕು. 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಒದಗಿಸಿದ ಕೇಂದ್ರ ಸರಕಾರ ಮೂರನೇ ಹಂತದಲ್ಲಿ ಮಾತ್ರ ಲಸಿಕೆಗೆ ಶುಲ್ಕ ವಿಧಿಸಿರುವುದು ಸರಿಯಲ್ಲ. ಉಚಿತ ಲಸಿಕೆ ಲಭ್ಯವಾಗದಿದ್ದರೆ ಕೇಂದ್ರ ಸರಕಾರದ ವಿರುದ್ಧದ ಯುವಜನತೆಯ ಮುನಿಸು ಇನ್ನಷ್ಟು ಹೆಚ್ಚಬಹುದು ಎಂದವರು ಎಚ್ಚರಿಸಿದ್ದಾರೆ.

ಕೊರೋನ ಸೋಂಕಿನ ಮೂರನೇ ಅಲೆಯೂ ಬರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಆದ್ದರಿಂದ ಆದಷ್ಟು ಬೇಗ ಎಲ್ಲರಿಗೂ ಲಸಿಕೆ ನೀಡಬೇಕಾಗಿದೆ. ದೇಶದಲ್ಲಿ ಕೊರೋನ ರೋಗಿಗಳಿಗೆ ಸಕಾಲದಲ್ಲಿ ಔಷಧಿ ಮತ್ತು ಆಮ್ಲಜನಕ ಲಭಿಸುತ್ತಿಲ್ಲ. ವಿಶ್ವದಲ್ಲಿ ಆಮ್ಲಜನಕ, ಲಸಿಕೆ, ಔಷಧ ಉತ್ಪಾದಿಸುವ ಪ್ರಮುಖ ದೇಶಗಳಲ್ಲಿ ಭಾರತವೂ ಸೇರಿದೆ. ಆದರೂ ನಮ್ಮಲ್ಲಿ ಈ ಮೂಲ ವ್ಯವಸ್ಥೆಯ ಕೊರತೆಯಿಂದಾಗಿ ಜನ ಸಾಯುತ್ತಿದ್ದಾರೆ. ಈ ಕಾರಣಕ್ಕೆ ಜನ ಸಾಯುವ ಪರಿಸ್ಥಿತಿ ವಿಶ್ವದ ಯಾವುದೇ ದೇಶದಲ್ಲಿ ಸಂಭವಿಸಿಲ್ಲ. ಆದರೆ ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ಈ ಬಗ್ಗೆ ಗಮನ ಹರಿಸದೆ ಪ್ರಧಾನಿ ಮೋದಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಗೆಹ್ಲೋಟ್ ಟೀಕಿಸಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಒದಗಿಸುವುದಾಗಿ ಮಧ್ಯಪ್ರದೇಶ, ಕೇರಳ, ಛತ್ತೀಸ್ಗಢ, ಉತ್ತರಪ್ರದೇಶ, ಸಿಕ್ಕಿಂ ಮತ್ತು ಅಸ್ಸಾಂ ರಾಜ್ಯಗಳು ಘೋಷಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News