ʼನೀವು ತಪ್ಪಾದ ಹಾದಿಯಲ್ಲಿದ್ದೀರಿʼ ಎಂದು ಮೋದಿ, ಅಮಿತ್ ಶಾ ಗೆ ಹೇಳಲು ಯತ್ನಿಸಿದ್ದೇನೆ: ಮೇಘಾಲಯ ರಾಜ್ಯಪಾಲ

Update: 2021-04-24 08:13 GMT

ಹೊಸದಿಲ್ಲಿ: "ನೀವು ತಪ್ಪಾದ ಹಾದಿಯಲ್ಲಿದ್ದೀರಿ ಎಂದು ಪ್ರಧಾನಿ  ಹಾಗೂ ಗೃಹ ಮಂತ್ರಿಗಳಿಗೆ ತಿಳಿ ಹೇಳಲು ನಾನು ಯತ್ನಿಸಿದ್ದೇನೆ ಹಾಗೂ ರೈತರನ್ನು ದಮನಿಸಬೇಡಿ, ಬೆದರಿಸಬೇಡಿ ಹಾಗೂ ಬಲವಂತಪಡಿಸಬೇಡಿ ಎಂದು ಹೇಳಿದ್ದೇನೆ" ಎಂದು  ಮೇಘಾಲಯ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು  ರೈತರ ಪ್ರತಿಭಟನೆ ಕುರಿತಂತೆ ಹರ್ಯಾಣದ ಪಕ್ಷೇತರ ಶಾಸಕ ಸೋಮ್‌ ಬೀರ್ ಸಂಗ್ವಾನ್ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಹರ್ಯಾಣಾದ ಬಿಜೆಪಿ-ಜೆಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಈ ಹಿಂದೆ ವಾಪಸ್ ಪಡೆದಿದ್ದ ಸಂಗ್ವಾನ್ ಅವರು ಮಲಿಕ್ ಅವರಿಗೆ  ರೈತ ಹೋರಾಟ  ಕುರಿತಂತೆ ಪತ್ರ ಬರೆದಿದ್ದರು. ಇದಕ್ಕೆ  ಉತ್ತರಿಸಿರುವ ರಾಜ್ಯಪಾಲರು "ರೈತರನ್ನು ದಿಲ್ಲಿಯಿಂದ ಬರಿಗೈಯ್ಯಲ್ಲಿ ಮರಳುಂತೆ ಮಾಡಬಾರದು" ಎಂದು ತಾವು ಪ್ರಧಾನಿ ಮತ್ತು ಗೃಹ ಸಚಿವರಿಗೆ ತಿಳಿಸಿದ್ದಾಗಿ ಹೇಳಿದ್ದಾರೆ.

"ನಾನು ಸನ್ಮಾನ್ಯ ಪ್ರಧಾನಿ ಮತ್ತು ಗೃಹ ಸಚಿವರನ್ನು ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಭೇಟಿಯಾಗಿ ರೈತರಿಗೆ ನ್ಯಾಯ ಒದಗಿಸಿ ಅವರ ನೈಜ ಬೇಡಿಕೆಗಳನ್ನು ಒಪ್ಪುವಂತೆ ಸಲಹೆ ನೀಡಿದ್ದೇನೆ. ರೈತರ ಹೋರಾಟವನ್ನು  ದಮನಿಸಲು ಸಾಧ್ಯವಿಲ್ಲ, ಕೇಂದ್ರ ಅವರ ಬೇಡಿಕೆಗಳನ್ನು ಒಪ್ಪಬೇಕು. ನಾನು ಮುಂದೆಯೂ ಈ ನಿಟ್ಟಿನಲ್ಲಿ ಶ್ರಮ ಪಡುತ್ತೇನೆ. ನನ್ನಿಂದಾದಷ್ಟು ಸಹಾಯ ಮಾಡುತ್ತೇನೆ," ಎಂದು ರಾಜ್ಯಪಾಲರು ಸಂಗ್ವಾನ್ ಅವರಿಗೆ  ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

"ರೈತರು ಒಂದು ಮಹಾನ್ ಹೋರಾಟವನ್ನು ಶಾಂತಿಯುತವಾಗಿ ನಡೆಸುತ್ತಿದ್ದಾರೆ ಹಾಗೂ ತಮ್ಮ ಹೋರಾಟದಲ್ಲಿ ತಮ್ಮ 300 ಸಹವರ್ತಿಗಳನ್ನು ಕಳೆದುಕೊಂಡಿದ್ದಾರೆ. ಇಷ್ಟೊಂದು ದೊಡ್ಡ ದುರಂತ ನಡೆದರೂ ಕೇಂದ್ರ ಸರಕಾರ ಒಮ್ಮೆ ಕೂಡ ವಿಷಾದ ವ್ಯಕ್ತಪಡಿಸದೇ ಇರುವುದು ಕಳವಳಕಾರಿ. ಇಂತಹ ಧೋರಣೆ ಖಂಡನಾರ್ಹ. ಇನ್ನೊಂದೆಡೆ ಸರಕಾರ ಹೋರಾಟವನ್ನು ಹತ್ತಿಕ್ಕಲು ಹಾಗೂ ಅದಕ್ಕೆ ಕೆಟ್ಟ ಹೆಸರು ತರಲು ಯತ್ನಿಸಿದೆ.  ಸರಕಾರದ ಬಲೆಗೆ ಬೀಳದೆ ತಮ್ಮ ಒಗ್ಗಟ್ಟನ್ನು ಉಳಿಸಿಕೊಂಡಿದ್ದಕ್ಕಾಗಿ ನಾನು ಎಲ್ಲಾ ರೈತರನ್ನು ಅಭಿನಂದಿಸುತ್ತೇನೆ" ಎಂದು ರಾಜ್ಯಪಾಲರು ಶಾಸಕರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News