ಆಕ್ಸಿಜನ್ ಪೂರೈಕೆಗೆ ಅಡ್ಡಿಯಾಗುವವರನ್ನು ಗಲ್ಲಿಗೇರಿಸುತ್ತೇವೆ: ದಿಲ್ಲಿ ಹೈಕೋರ್ಟ್ ಎಚ್ಚರಿಕೆ
ಹೊಸದಿಲ್ಲಿ: ಆಮ್ಲಜನಕದ ಪೂರೈಕೆಗೆ ಯಾರಾದರೂ ಅಡ್ಡಿಯಾದರೆ ನಾವು ಆ ವೃಕ್ತಿಯನ್ನು ಗಲ್ಲಿಗೇರಿಸುತ್ತೇವೆ ಎಂದು ದಿಲ್ಲಿ ಹೈಕೋರ್ಟ್ ಶನಿವಾರ ಎಚ್ಚರಿಕೆ ನೀಡಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಕೋವಿಡ್ ರೋಗಿಗಳಿಗೆ ಆಮ್ಲಜನಕದ ಕೊರತೆಯ ಬಗ್ಗೆ ವಿವಿಧ ಆಸ್ಪತ್ರೆಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಎಚ್ಚರಿಕೆ ನೀಡಿದೆ.
ಅಮ್ಲಜನಕ ಸರಬರಾಜಿಗೆ ಯಾರು ಅಡ್ಡಿಯಾಗಿದ್ದಾರೆ ಎಂಬುದಕ್ಕೆ ಒಂದು ಉದಾಹರಣೆ ನೀಡುವಂತೆ ದಿಲ್ಲಿ ಸರಕಾರಕ್ಕೆ ತಿಳಿಸಿದ ನ್ಯಾಯಾಲಯವು, ನಾವು ಆ ವ್ಯಕ್ತಿಯನ್ನು ಗಲ್ಲಿಗೇರಿಸುತ್ತೇವೆ. ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ರಾಜಧಾನಿಗೆ 480 ಮೆಟ್ರಿಕ್ ಟನ್ ಆಮ್ಲಜನಕ ಸಿಗದಿದ್ದರೆ ವ್ಯವಸ್ಥೆಯು ಕುಸಿಯುತ್ತದೆ ಎಂದು ದಿಲ್ಲಿ ಸರಕಾರವು ನ್ಯಾಯಾಲಯಕ್ಕೆ ತಿಳಿಸಿದೆ.
ಹಲವು ದೊಡ್ಡ ಹಾಗೂ ಸಣ್ಣ ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕದ ಕೊರತೆಯ ಬಗ್ಗೆ ಹೈಕೋರ್ಟ್ ಮುಂದೆ ಧ್ವನಿ ಎತ್ತಿವೆ. ಆಮ್ಲಜನಕ ಕೊರತೆಯಿಂದ ದಿಲ್ಲಿಯ ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.