ಕೊರೋನ ಲಸಿಕೆ ಪಡೆದವರು 28 ದಿನ ರಕ್ತದಾನ ಮಾಡಬಾರದೇ ?: ತಜ್ಞ ವೈದ್ಯರು ಹೀಗೆ ಉತ್ತರಿಸುತ್ತಾರೆ...

Update: 2021-04-24 15:11 GMT

ಕೊರೋನ ಲಸಿಕೆ ಪಡೆದವರು 28 ದಿನ ರಕ್ತದಾನ ಮಾಡಬಾರದು, ಅಂದರೆ ಮೊದಲ ಡೋಸ್ ತೆಗೆದುಕೊಂಡ ನಂತರ ಎರಡರಿಂದ ಎರಡೂವರೆ ತಿಂಗಳು ರಕ್ತದಾನ ಮಾಡಲು ಸಾಧ್ಯವಿಲ್ಲ. ಹೆಚ್ಚಾಗಿ ರಕ್ತದಾನ ಮಾಡುವ 18-45 ವಯಸ್ಸಿನೊಳಗಿನವರೇ ಈಗ ಲಸಿಕೆ ಹಾಕಿಸಿಕೊಳ್ಳಲಿರುವುದರಿಂದ ರಕ್ತದಾನ ಮಾಡಲಿಚ್ಚಿಸುವವರು ಮೊದಲೇ ರಕ್ತದಾನ ಮಾಡಿ ಆ ಮೇಲೆ ಲಸಿಕೆ ಪಡೆಯಿರಿ ಎಂದು ಹೇಳಿರುವ ವಿಡಿಯೋ ಹರಿದಾಡುತ್ತಿದೆ. ಇಂಥ ನಿಯಮವನ್ನು ಮಾಡಿದ್ದರೆ ಅದನ್ನು ಪ್ರಶ್ನಿಸುವ ಬದಲಿಗೆ ಬಂದ ನಿಯಮವೇ ವೇದವಾಕ್ಯ ಎಂಬಂತೆ ಹೇಳಿಕೆಗಳನ್ನು ನೀಡುತ್ತಿರುವುದು ಶೋಚನೀಯವಾಗಿದೆ.

ಕೊರೋನ ಲಸಿಕೆ ಪಡೆದವರು ಎರಡನೇ ಡೋಸ್ ಪಡೆದ 28 ದಿನಗಳವರೆಗೆ ರಕ್ತದಾನ ಮಾಡುವಂತಿಲ್ಲ ಎಂದು ಕೇಂದ್ರ ಸರಕಾರದ ಆರೋಗ್ಯ ಇಲಾಖೆಯಡಿ ಇರುವ ರಾಷ್ಟ್ರೀಯ ರಕ್ತ ಪೂರಣ ಮಂಡಳಿಯು ಫೆಬ್ರವರಿ 17ರ ಸಭೆಯಲ್ಲಿ ನಿರ್ಣಯಿಸಿದೆ ಎಂದು ವರದಿಯಾಗಿದೆ. [ https://science.thewire.in/health/no-blood-donation-for-28-days-after-last-jab-of-covid-19-vaccine-order/ ] ವಿಶ್ವದೆಲ್ಲೆಡೆ ಒಂದು ದಾರಿಯಾದರೆ ನಮ್ಮಲ್ಲಿ ಬೇರೆಯೇ ದಾರಿ ಎನ್ನುವುದಕ್ಕೆ ಇದು ಇನ್ನೊಂದು ನಿದರ್ಶನವಾಗಿದೆ. ಇದೇ ಮಂಡಳಿಯು ಕಳೆದ ವರ್ಷ ಕೊರೋನ ಸೋಂಕಿತರು ರಕ್ತದಾನ ಮಾಡುವ ಬಗ್ಗೆ ಕೈಗೊಂಡ ನಿರ್ಧಾರಗಳೂ ಟೀಕೆಗೊಳಗಾಗಿದ್ದವು. 

ಅಮೆರಿಕದ ರೆಡ್ ಕ್ರಾಸ್ ಸಂಸ್ಥೆಯನುಸಾರ ಅಮೆರಿಕದಲ್ಲಿ ನೀಡಲಾಗುತ್ತಿರುವ ಎಂಆರ್‌ಎನ್‌ಎ ಲಸಿಕೆ ಮತ್ತು ಜಾನ್ಸನ್ ಅಂಡ್ ಜಾನ್ಸನ್ ಹಾಗೂ ಅಸ್ತ್ರ ಜೆನೆಕ (ಭಾರತದಲ್ಲಿ ಕೋವಿಶೀಲ್ಡ್) ಲಸಿಕೆಗಳನ್ನು ಪಡೆದ ಮೇಲೆ ರಕ್ತದಾನ ಮಾಡುವುದಕ್ಕೆ ಯಾವ ಕಾಯುವಿಕೆಯೂ ಅಗತ್ಯವಿಲ್ಲ, ಆದರೆ ಯಾವ ಲಸಿಕೆ ಎಂಬ ವಿವರವು ಲಭ್ಯವಿಲ್ಲದಿದ್ದರೆ ಎರಡು ವಾರ ಕಾಯಬೇಕು ಎಂದು ಹೇಳಲಾಗಿದೆ.

[ https://www.redcross.org/about-us/news-and-events/news/2021/what-you-need-to-know-about-covid-19-vaccines-and-blood-donation.html, https://www.live5news.com/2021/03/28/fact-or-fiction-blood-donations-after-getting-your-covid-vaccine/

ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಗಳನುಸಾರ, ಯಾವುದೇ ಲಸಿಕೆಯನ್ನು ಪಡೆದವರು 7 ದಿನಗಳ ನಂತರ, ಅಂದರೆ ಎಂಟನೇ ದಿನದಿಂದ, ರಕ್ತದಾನ ಮಾಡಬಹುದಾಗಿದೆ, ಅಡ್ಡ ಪರಿಣಾಮಗಳೇನಾದರೂ ಆಗಿದ್ದರೆ, ಅವು ಮರೆಯಾಗಿ ಒಂದು ವಾರದ ಬಳಿಕ ರಕ್ತದಾನ ಮಾಡಬಹುದಾಗಿದೆ. [ https://www.blood.co.uk/news-and-campaigns/news-and-statements/coronavirus-covid-19-updates/, https://www.transfusionguidelines.org/dsg/bm/guidelines/coronavirus-vaccination

ಅದೇ ಅಸ್ತ್ರ ಜೆನೆಕಾ ಲಸಿಕೆಯನ್ನು ಕೋವಿಶೀಲ್ಡ್ ಹೆಸರಲ್ಲಿ ಭಾರತದಲ್ಲಿ ನೀಡಲಾಗುತ್ತಿರುವುದರಿಂದ, ಇನ್ನೊಂದು ಲಸಿಕೆಯಾದ ಕೊವಾಕ್ಸಿನ್‌ನಲ್ಲೂ ಸಜೀವ ವೈರಸ್ ಕಣಗಳು ಇಲ್ಲದೇ ಇರುವುದರಿಂದ, ಇವೇ ನೀತಿಗಳನ್ನು ಇಲ್ಲೂ ಅಳವಡಿಸಿಕೊಳ್ಳಬಹುದಾಗಿದೆ. ಆದರೆ ನಮ್ಮ ರಾಷ್ಟ್ರೀಯ ರಕ್ತ ಪೂರಣ ಮಂಡಳಿಯ ಆದೇಶವು ಇದಕ್ಕಿಂತ ಭಿನ್ನವಾಗಿದ್ದು, ಅನಗತ್ಯವಾದ ಗೊಂದಲಗಳನ್ನು ಸೃಷ್ಟಿಸುವಂತಿದೆ. ಹೀಗೆ ಎಲ್ಲಾ ದಾನಿಗಳೂ ಲಸಿಕೆಗೆ ಮೊದಲು ರಕ್ತದಾನ ಮಾಡಿದರೂ ಕೂಡ ರಕ್ತ ಮತ್ತದರ ಕಣಗಳನ್ನು 35-42 ದಿನಗಳಿಗಿಂತ ಹೆಚ್ಚು ಕಾಲ ಸಂರಕ್ಷಿಸಿಡಲು ಸಾಧ್ಯವಿಲ್ಲದಿರುವುದರಿಂದ ಅವು ವ್ಯರ್ಥಗೊಳ್ಳುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ, ರಾಷ್ಟ್ರೀಯ ರಕ್ತ ಪೂರಣ ಮಂಡಳಿಯ ಆದೇಶವನ್ನು ಬದಲಿಸಿ, ಅಮೆರಿಕದ ರೆಡ್ ಕ್ರಾಸ್ ಮತ್ತು ಬ್ರಿಟಿಷ್ ಆರೋಗ್ಯ ಸೇವೆಗಳು ಅನುಸರಿಸುವ ಕ್ರಮವನ್ನೇ ಇಲ್ಲೂ ಅಳವಡಿಸಿಕೊಳ್ಳುವುದು ಒಳ್ಳೆಯದು.

-ಡಾ. ಶ್ರೀನಿವಾಸ ಕಕ್ಕಿಲ್ಲಾಯ 

ಕೊರೋನ ಲಸಿಕೆ ಪಡೆದವರು 28 ದಿನ ರಕ್ತದಾನ ಮಾಡಬಾರದು, ಅಂದರೆ ಮೊದಲ ಡೋಸ್ ತೆಗೆದುಕೊಂಡ ನಂತರ ಎರಡರಿಂದ ಎರಡೂವರೆ ತಿಂಗಳು ರಕ್ತದಾನ ಮಾಡಲು...

Posted by Srinivas Kakkilaya on Saturday, 24 April 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News