ವೀಕೆಂಡ್ ಕರ್ಫ್ಯೂ : ಉಪ್ಪಿನಂಗಡಿ ಪೇಟೆಯಲ್ಲಿ ಜನಸಂಖ್ಯೆ ವಿರಳ

Update: 2021-04-24 16:53 GMT

ಉಪ್ಪಿನಂಗಡಿ: ವೀಕೆಂಡ್ ಕರ್ಫ್ಯೂ ದಿನವಾದ ಶನಿವಾರ ಬೆಳಗ್ಗೆ 6ರಿಂದ 10ರವೆಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶವಿತ್ತಾದರೂ, ಉಪ್ಪಿನಂಗಡಿ ಪೇಟೆಯಲ್ಲಿ ಜನಸಂಖ್ಯೆ ಭಾರೀ ವಿರಳವಾಗಿತ್ತು.

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆಗಳಲ್ಲಿ ವಾಹನ ಸಂಚಾರ ವಿರಳಗೊಂಡು, ರಸ್ತೆಗಳು ಬಿಕೋ ಅನ್ನುತ್ತಿದ್ದವು. ವೀಕೆಂಡ್ ಕರ್ಫ್ಯೂ ಬಗ್ಗೆ ತಿಳಿದಿದ್ದ ಹೆಚ್ಚಿನ ಮಂದಿ ಶುಕ್ರವಾರವೇ ಅಗತ್ಯ ಸಾಮಗ್ರಿಗಳ ಖರೀದಿ ಮುಗಿಸಿದ್ದು, ಅದ್ದರಿಂದ ಹೆಚ್ಚಿನವರು ಶನಿವಾರ ಮನೆಯಿಂದ ಪೇಟೆಯತ್ತ ಮುಖ ಮಾಡಲಿಲ್ಲ. ಇಲ್ಲಿನ ಬಸ್ ನಿಲ್ದಾಣಕ್ಕೆ ಅಪರೂಪಕ್ಕೊಂದು ಎಂಬಂತೆ ಬಸ್‍ಗಳು ಬರುತ್ತಿದ್ದರೂ, ಪ್ರಯಾಣಿಕರಿಲ್ಲದೆ ಬಸ್‍ಗಳು ಖಾಲಿಯಾಗಿತ್ತು. 10 ಗಂಟೆಯ ಮೆಡಿಕಲ್ ಮತ್ತು ಆಸ್ಪತ್ರೆಗಳನ್ನು ಬಿಟ್ಟು  ಎಲ್ಲಾ ಅಂಗಡಿಗಳು ಬಂದ್ ಆದವು. ಜನರಿಲ್ಲದೇ ರಸ್ತೆ ಬಿಕೋ ಎನ್ನುತ್ತಿತ್ತು.

ಆಕ್ರೋಶ: ಕೋವಿಡ್-19ನ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ಬಟ್ಟೆ ಅಂಗಡಿ, ಫ್ಯಾನ್ಸಿ ಅಂಗಡಿ, ಪಾದರಕ್ಷೆ ಅಂಗಡಿಗಳನ್ನು ಮುಚ್ಚಲು ಆದೇಶಿಸಿರುವುದಕ್ಕೆ ವರ್ತಕರ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಉಪ್ಪಿನಂಗಡಿ ವರ್ತಕರ ಸಂಘದ ನಿಕಟಪೂರ್ವಾಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ, ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಎಂದು ಹೇಳಿಕೊಂಡು ಬರುತ್ತಿದ್ದ ಸರಕಾರ ದಿಡೀರ್ ಆಗಿ ಮಾರ್ಗಸೂಚಿ ಬದಲಾವಣೆ ಮಾಡಿದ್ದು, ಕೆಲವು ಅಂಗಡಿಗಳವರಿಗೆ ಶುಕ್ರವಾರ ದಿನ ನೈಟ್ ಕರ್ಫ್ಯೂ ಡೇ ಕರ್ಫ್ಯೂ ನಂತಾಗಿದೆ. ಅಧಿಕಾರಿಗಳು ಶುಕ್ರವಾರ ದಿನ ಕೆಲವು ಅಂಗಡಿಗಳವರನ್ನು ಬಲವಂತವಾಗಿ ಬಂದ್ ಮಾಡಿಸಿದ್ದಾರೆ. ಸರಕಾರ ಹಾಗೂ ಅಧಿಕಾರಿಗಳ ಈ ನಡೆ ನಮಗೆ ಗೊಂದಲ ಮೂಡಿಸಿದ್ದು, ಈ ದಿಢೀರ್ ಮಾರ್ಗಸೂಚಿಯಿಂದಾಗಿ ವರ್ತಕರು ಸಮಸ್ಯೆಗೆ ಸಿಲುಕುವಂತಾಗಿದೆ. ಹಾಲು ಓಕೆ. ಆದ್ರೆ ಆಲ್ಕೋ ಹಾಲ್ ಯಾಕೆ? ಅದರ ಅಗತ್ಯವಿದೆಯೇ? ಬೆರಳೆಣಿಕೆಯ ಅಂಗಡಿಗಳನ್ನು ಬಂದ್ ಮಾಡಿದರೆ ಕೊರೋನಾ ಹರಡದಂತೆ ತಡೆಯಲು ಸಾಧ್ಯವಿದೆಯೇ ಎಂಬುದಕ್ಕೆಲ್ಲಾ ಸರಕಾರ ಉತ್ತರಿಸಬೇಕು. ಆಭರಣಗಳನ್ನು ಮಾರುವ ಫ್ಯಾನ್ಸಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಅದನ್ನು ಮುಟ್ಟಿ ಕೆಲಸ ಮಾಡುವ ಬ್ಯೂಟಿ ಪಾರ್ಲರ್‍ಗಳಿಗೆ ಅವಕಾಶ ನೀಡಿದ್ದಾರೆ. ಇನ್ನೊಂದೆಡೆ ಬಾರ್ಬರ್ ಶಾಪ್‍ಗಳಿಗೂ ಅವಕಾಶ ನೀಡಲಾಗಿದೆ. ಇಲ್ಲಿ ಕೊರೋನಾ ಹರಡಲು ಸಾಧ್ಯವಿಲ್ಲವೇ? ಕೇವಲ ಫ್ಯಾನ್ಸಿ, ಬಟ್ಟೆ ಅಂಗಡಿಗಳಲ್ಲಿ ಮಾತ್ರ ಕೊರೋನಾ ಹರಡುವುದೇ? ಮುಂದಕ್ಕೆ ಹಬ್ಬ- ಹರಿದಿನಗಳು ಬರುವುರಿಂದ ವ್ಯಾಪಾರವಾಗುವ ನಿರೀಕ್ಷೆಯಲ್ಲಿ ಬಟ್ಟೆ ಅಂಗಡಿ, ಫ್ಯಾನ್ಸಿ ಅಂಗಡಿಯವರು ಸಾಲ- ಸೋಲ ಮಾಡಿ ಲಕ್ಷಗಟ್ಟಲೆ ಮಾಲನ್ನು ತಂದು ಅಂಗಡಿಯಲ್ಲಿ ಇಟ್ಟಿದ್ದಾರೆ. ಆದರೆ ಅವರ ಅಂಗಡಿ ಮುಚ್ಚಿಲ್ಪಟ್ಟಿದ್ದರಿಂದ ಅವರ ಸ್ಥಿತಿ ಇಂದು ಏನಾಗಬೇಡ? ಇಲ್ಲಿನ ಎಲ್ಲಾ ವರ್ತಕರ ಸ್ಥಿತಿ ದುಡಿದು ತಿನ್ನುವಷ್ಟು ಮಾತ್ರ ಇದೆಯೇ ಹೊರತು, ಕುಳಿತು ತಿನ್ನುವಷ್ಟು ಇಲ್ಲ. ಆಯಾಯ ದಿನ ದುಡಿದು ಅಂದಿನ ತುತ್ತಿನ ಚೀಲ ತುಂಬಿಸಬೇಕಾದ ಅನಿವಾರ್ಯತೆಯಿದೆ ಎಂದು ಸಮಸ್ಯೆಯ ಬಗ್ಗೆ ಅವಲತ್ತುಕೊಂಡರಲ್ಲದೆ, ಶಾಸಕರು ನಮ್ಮೂರಿನವರೇ ಆಗಿದ್ದು, ಅವರೊಮ್ಮೆ ಪೇಟೆಗೆ ಬಂದು ಪರಿಶೀಲನೆ ನಡೆಸಬೇಕು. ಸರಕಾರದ ಮಾರ್ಗಸೂಚಿ ಸರಿಯಿದೆಯೇ? ಸರಕಾರದ ಈ ದಿಢೀರ್ ಮಾರ್ಗಸೂಚಿಯಿಂದ ವರ್ತಕರು ಅನುಭವಿಸುತ್ತಿರುವ ಸಮಸ್ಯೆಗಳೇನು ಎಂಬುದನ್ನು ಅರಿತು, ಅದನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News