ಕೊರೋನ ಲಸಿಕೆ ಕುರಿತ ವದಂತಿಗೆ ಬಲಿಯಾಗಬೇಡಿ: ಪ್ರಧಾನಿ ಮೋದಿ ಮನವಿ

Update: 2021-04-25 06:33 GMT

ಹೊಸದಿಲ್ಲಿ: ಲಸಿಕೆ ಕುರಿತು ಯಾವುದೇ ವದಂತಿಗೆ ಬಲಿಯಾಗದಂತೆ ನಾನು ಜನರನ್ನು ಕೋರುತ್ತೇನೆ. ಸರಕಾರವು ಎಲ್ಲಾ ರಾಜ್ಯ ಸರಕಾರಗಳಿಗೆ ಉಚಿತ ಲಸಿಕೆಗಳನ್ನು ಕಳುಹಿಸಿದೆ ಎಂದು ನೀವೆಲ್ಲರೂ ತಿಳಿದಿರಬೇಕು. 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ಇದರ ಲಾಭ ಪಡೆಯಬಹುದು. ಮೇ 1ರಿಂದ ಲಸಿಕೆಗಳು 18 ವರ್ಷಕ್ಕಿಂತ ಮೇಲ್ಮಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಲಭ್ಯವಿರುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ರವಿವಾರ ಹೇಳಿದ್ದಾರೆ. 

ಕೋವಿಡ್ ವಿರುದ್ದ ಹೋರಾಟದಲ್ಲಿ ಕೇಂದ್ರ ಸರಕಾರವು ರಾಜ್ಯಗಳಿಗೆ ಬೆಂಬಲ ನೀಡಲಿದೆ. ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರಕಾರಗಳ ಪ್ರಯತ್ನಗಳನ್ನು ಮುನ್ನಡೆಸಲು ಕೇಂದ್ರ ಸರಕಾರ ಸಮರ್ಪಿತವಾಗಿದೆ. ನಮ್ಮ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರು ಪ್ರಸ್ತುತ ಕೋವಿಡ್-19 ವಿರುದ್ಧ ಮಹಾ ಯುದ್ದವನ್ನು ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರು ಸಾಂಕ್ರಾಮಿಕ ರೋಗದೊಂದಿಗೆ ಹಲವು ರೀತಿಯ ಅನುಭವ ಪಡೆದಿದ್ದಾರೆ. ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಕೋವಿಡ್-19 ಕುರಿತು ಮಾಹಿತಿ ಪಡೆಯಲು ನಾನು ನಿಮ್ಮೆಲ್ಲರಿಗೂ ಮನವಿ ಮಾಡುವೆ. ಕೋವಿಡ್ -19 ಕುರಿತು ಮಾಹಿತಿ ಹಂಚಿಕೊಳ್ಳಲು ಹಲವು ವೈದ್ಯರು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅಲ್ಲಿ ಅವರು ಆಪ್ತ ಸಮಾಲೋಚನೆಯನ್ನು ಕೂಡ ನೀಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದರು.

ಕೋವಿಡ್-19 ನಮ್ಮ ತಾಳ್ಮೆ ಹಾಗೂ ನೋವು ಸಹಿಸುವ ಸಾಮಥ್ರ್ಯವನ್ನು ಪರೀಕ್ಷಿಸುತ್ತಿರುವ ಸಮಯದಲ್ಲಿ ನಿಮ್ಮೊಂದಿಗೆ ನಾನು ಮಾತನಾಡುತ್ತಿದ್ದೇನೆ. ನಮ್ಮ ಪ್ರೀತಿಪಾತ್ರರಲ್ಲಿ ಹಲವರು ನಮ್ಮನ್ನು ಅಕಾಲಿಕವಾಗಿ ಅಗಲಿಬಿಟ್ಟರು.  ಕೋವಿಡ್-19ರ ಮೊದಲ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ ನಂತರ ದೇಶದ ಸ್ಥೈರ್ಯ ಹೆಚ್ಚಿತ್ತು. ಆದರೆ, ಈಗ ಬೀಸಿರುವ ಚಂಡಮಾರುತವು ದೇಶವನ್ನು ಬೆಚ್ಚಿಬೀಳಿಸಿದೆ. ಕೋವಿಡ್ ನ 2ನೇ ಅಲೆಯನ್ನು ನಿಭಾಯಿಸಲು ನಾನು ಫಾರ್ಮಾ ಉದ್ಯಮ, ಆಮ್ಲಜನಕ  ಉತ್ಪಾದನೆ ಮುಂತಾದ ಹಲವು ಕ್ಷೇತ್ರಗಳ ತಜ್ಞರೊಂದಿಗೆ ಸಭೆ ನಡೆಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News