ಕಪ್ಪನ್ ಅವರ ಜೀವ ತೀವ್ರ ಅಪಾಯದಲ್ಲಿದೆ: ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದ ವಕೀಲರು

Update: 2021-04-25 11:54 GMT

ಹೊಸದಿಲ್ಲಿ: ಕೋವಿಡ್-19 ಸೋಂಕಿಗೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿರುವ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು  ತಾವು ಮಧ್ಯಪ್ರವೇಶಿಸಿ ತಕ್ಷಣವೇ ಮಥುರಾ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಕೋರಿ ಕಪ್ಪನ್ ವಕೀಲರು ಭಾರತದ ನೂತನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ಪತ್ರ ಬರೆದಿದ್ದಾರೆ.

ಈ ಪತ್ರವನ್ನು ಸಿದ್ದೀಕ್ ಪತ್ನಿಯ ಪರವಾಗಿ ಬರೆಯಲಾಗಿದೆ.

ಕಪ್ಪನ್  “ಜೀವವು ತೀವ್ರ ಅಪಾಯದಲ್ಲಿದೆ” ಕಪ್ಪನ್  ಅವರನ್ನು ಮಥುರಾದ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಒಂದು ಗೂಡಿನಲ್ಲಿ ಚೈನ್ ನಿಂದ ಕಟ್ಟಿಹಾಕಿದಂತೆ ಬಂಧಿಸಿದ್ದಾರೆ. ಅವರಿಗೆ ಓಡಾಡಲು ಬಿಡುತ್ತಿಲ್ಲ. ಕಳೆದ 4 ದಿನಗಳಿಂದ ಅವರಿಗೆ ಆಹಾರವನ್ನು ಸ್ವೀಕರಿಸಲು  ಅಥವಾ ಶೌಚಾಲಯಕ್ಕೆ ಹೋಗಲು ಅವಕಾಶ ನೀಡಿಲ್ಲ. ಅವರ ಸ್ಥಿತಿ ತುಂಬಾ ಗಂಭೀರವಾಗಿದೆ. ತಕ್ಷಣವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಅದು ಅವರ ಅಕಾಲಿಕ ಸಾವಿಗೆ ಕಾರಣವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮಲಯಾಳಂ ನ ಸ್ವತಂತ್ರ ಪತ್ರಕರ್ತ ಕಪ್ಪನ್ ಅವರನ್ನು ಸಾಮಾಜಿಕ ಅಶಾಂತಿ ಸೃಷ್ಟಿಸಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದ ಮೇಲೆ ಯುಎಪಿಎ ಮತ್ತು ದೇಶದ್ರೋಹದ ಕಾಯ್ದೆ ಅಡಿ ಅಕ್ಟೋಬರ್ 5 ರಂದು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದರು. 19 ವರ್ಷದ ದಲಿತ ಯುವತಿಯ ಅತ್ಯಾಚಾರ ಹಾಗೂ ಹತ್ಯೆಯ ಕುರಿತು ವರದಿಗಾಗಿ ಅವರು ಹತ್ರಾಸ್‌ಗೆ ಹೋಗುತ್ತಿದ್ದಾಗ ತಡೆದು ಬಂಧಿಸಲಾಗಿತ್ತು.

ವೈದ್ಯಕೀಯ ತುರ್ತುಸ್ಥಿತಿಯನ್ನು ಉಲ್ಲೇಖಿಸಿ ಕಪ್ಪನ್ ಅವರನ್ನು ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ವರ್ಗಾಯಿಸುವಂತೆ ಕೋರಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಎಪ್ರಿಲ್ 20 ರಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News