ಕೋವಿಡ್‌ ನಡುವೆಯೂ ನಡೆಯುತ್ತಿರುವ ʼಐಪಿಎಲ್‌ʼ ನ ವರದಿಗಳನ್ನು ಪ್ರಕಟಿಸುವುದಿಲ್ಲವೆಂದ ನ್ಯೂ ಇಂಡಿಯನ್‌ ಎಕ್ಸ್‌ ಪ್ರೆಸ್‌

Update: 2021-04-25 16:42 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳು ತುಂಬಿ ತುಳುಕಾಡುತ್ತಿವೆ. ಹಲವಾರು ಮಂದಿ ಆಕ್ಸಿಜನ್‌ ಇಲ್ಲದೇ ಪರದಾಡುತ್ತಿದ್ದಾರೆ. ಮೃತದೇಹಗಳನ್ನು ಸುಡಲು ಸ್ಮಶಾನಗಳು ದೊರಕದಂತಾಗಿದೆ. ಈ ಹಿನ್ನೆಲೆಯಲ್ಲಿ ವಿಭಿನ್ನವೆಂಬಂತೆ ದಿ ನ್ಯೂ ಇಂಡಿಯನ್‌ ಎಕ್ಸ್‌ ಪ್ರೆಸ್‌ ಪತ್ರಿಕೆಯು ಇಂತಹಾ ಬಿಕ್ಕಟ್ಟನ್ನು ದೇಶ ಎದುರಿಸುತ್ತಿರುವಾಗ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಗೆ ಸಂಬಂಧಿಸಿದ ವರದಿಗಳನ್ನು ಪ್ರಕಟಿಸುವುದಿಲ್ಲ ಎಂದು ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಿದೆ.

"ಭಾರತವು ಅತೀ ಕಠಿಣವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಾವಿರಾರು ಮಂದಿ ಕೋವಿಡ್‌ ಸಾಂಕ್ರಾಮಿಕದಿಂದ ಬಾಧಿತರಾಗಿದ್ದಾರೆ. ಅವರ ಜೀವಿಸುವ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಈ ವೈರಸ್‌ ನ ಸವಾಲನ್ನು ಎದುರಿಸುವಲ್ಲಿ ಆರೋಗ್ಯ ವ್ಯವಸ್ಥೆಗಳು ವಿಫಲವಾಗುತ್ತಿದೆ. ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚಳವಾಗುತ್ತಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆ ಎದುರಾಗಿದೆ. ದೇಶವು ಇಂತಹಾ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಡೆಯುತ್ತಿರುವ ಕ್ರಿಕೆಟ್‌ ಹಬ್ಬ ಐಪಿಎಲ್‌ ನ ವರದಿಗಳನ್ನು ನಾವು ಪ್ರಕಟಿಸುವುದಿಲ್ಲ. ನಮಗೆ ಐಪಿಎಲ್‌ ನೊಂದಿಗೆ ತೊಂದರೆಯಿಲ್ಲ. ಆದರೆ ಅದನ್ನು ಸಂಘಟಿಸುತ್ತಿರುವ ಸಮಯದ ಬಗ್ಗೆ ಆಕ್ಷೇಪವಿದೆ. ಓದುಗರು ಇದನ್ನು ಅರ್ಥೈಸಿಕೊಳ್ಳುತ್ತಾರೆಂದು ನಮಗೆ ವಿಶ್ವಾಸವಿದೆ" ಎಂದು ತನ್ನ ಮುಖಪುಟದಲ್ಲಿ ಪ್ರಕಟಿಸಿದೆ.

ಈ ಕುರಿತಾದಂತೆ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ನ್ಯೂ ಇಂಡಿಯನ್‌ ಎಕ್ಸ್‌ ಪ್ರೆಸ್‌ ನ ವಿಭಿನ್ನ ಮತ್ತು ವಿನೂತನ ಕಾರ್ಯದ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News