ಜನಸ್ತೋಮಗಳಿಗೆ ನಿಷೇಧ, ಕಡ್ಡಾಯ ಮಾಸ್ಕ್ ಧಾರಣೆಯಿಂದ ಕೋವಿಡ್ ತೊಲಗಲಿದೆ: ಕೆ. ಶ್ರೀನಾಥ್ ರೆಡ್ಡಿ

Update: 2021-04-25 17:10 GMT

ಹೊಸದಿಲ್ಲಿ, ಎ.26: ಯಾವುದೇ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸರಕಾರವು ಆರ್ಥಿಕ ಬೆಂಬಲವನ್ನು ನೀಡುವುದು ಅತ್ಯವಶ್ಯಕವಾಗಿದ್ದು, ಕೋವಿಡ್-19 ಲಸಿಕೆಗಳು ಪ್ರತಿಯೊಬ್ಬ ನಾಗರಿಕರಿಗೂ ಉಚಿವಾಗಿ ನೀಡಬೇಕೆಂದು ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಅಧ್ಯಕ್ಷ ಕೆ. ಶ್ರೀನಾಥ್ ರೆಡ್ಡಿ ರವಿವಾರ ಆಗ್ರಹಿಸಿದ್ದಾರೆ.

ಕೊರೋನ ಸೂಪರ್ಸ್ಪ್ರೆಡರ್ ಕಾರ್ಯಕ್ರಮಗಳನ್ನು (ಜನರು ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಳ್ಳುವ ಸಭೆಗಳು) ತಡೆಗಟ್ಟಿದಲ್ಲಿ ಹಾಗೂ ಪ್ರತಿಯೊಬ್ಬರು ಮಾಸ್ಕ್ ಧರಿಸಿದಲ್ಲಿ ಮೂರೇ ವಾರಗಳೊಳಗೆ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ಅವರು ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು,ವಿಶೇಷವಾಗಿ ಸಾಂಕ್ರಾಮಿಕ ರೋಗಗಳ ಹಾವಳಿಯಂತಹ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯ ಸನ್ನಿವೇಶಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಬೇಕು ಎಂದವರು ಹೇಳಿದರು. ವಸ್ತುಶಃ ಎಲ್ಲಾ ಅರ್ಥಶಾಸ್ತ್ರಜ್ಞರು ಕೂಡಾ ಇದನ್ನು ಒಪ್ಪುತ್ತಾರೆ. ಹೀಗಾಗಿ ಯಾವುದೇ ದೇಶವು ಸಾರ್ವಜನಿಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನರು ಲಸಿಕೆಗಳನ್ನು ಪಡೆಯುವುದಕ್ಕೆ ಶುಲ್ಕವನ್ನು ವಿಧಿಸುವುದಿಲ್ಲ ಎಂದವರು ಹೇಳಿದರು.

ಆದರೆ ಯಾರಾದರೂ ಖಾಸಗಿ ಆಸ್ಪತ್ರೆಗೆ ಲಸಿಕೆಯನ್ನು ಪಡೆಯಲು ಇಷ್ಟಪಟ್ಟಲ್ಲಿ ಅವರಿಗೆ ಸೇವಾ ಶುಲ್ಕವನ್ನು ವಿಧಿಸಬಹುದಾಗಿದೆ. ಆದರೆ ಲಸಿಕೆಯನ್ನು ಮಾತ್ರ ಉಚಿತವಾಗಿಯೇ ನೀಡಬೇಕಾಗುತ್ತದೆ ಎಂದು ರೆಡ್ಡಿ ಅಭಿಪ್ರಾಯಿಸಿದರು.
 
ಕೋವಿಡ್-19 ಸೋಂಕಿನ ಪ್ರಕರಣಗಳು ಏರಿಕೆ ಹಾಗೂ ಇಳಿಕೆಯ ಬಗ್ಗೆ ಅಂದಾಜಿಸಲು ಗಣಿತ ಮಾದರಿಗಳನ್ನು ಅನುಸರಿಸುವುದರಲ್ಲಿ ತನಗೆ ನಂಬಿಕೆಯಿಲ್ಲವೆಂದು ರೆಡ್ಡಿ ಹೇಳಿದ್ದಾರೆ. ಭಾರತದಲ್ಲಿ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಸೋಂಕು ಹರಡುವಿಕೆಯ ಪ್ರಮಾಣವು ವಿಭಿನ್ನವಾಗಿದೆಯೆಂದವರು ಹೇಳಿದರು.

ಭಾರತಕ್ಕೆ ಕೋವಿಡ್-19 ಮೂರನೆ ಅಲೆಯೂ ಅಪ್ಪಳಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರೆಡ್ಜಿ, ಆ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದಿದ್ದಾರೆ. ‘‘ಲಸಿಕೆ ನೀಡಿಕೆಯ ಕಾರ್ಯಕ್ರಮವು ಚೆನ್ನಾಗಿ ಮುಂದುವರಿದಲ್ಲಿ, ಸೋಂಕು ಸೌಮ್ಯವಾದ ರೂಪದಲ್ಲಿ ನಮ್ಮೊಂದಿಗಿರಲಿದೆ ಹಾಗೂ ಮತ್ತೊಮ್ಮೆ ಮರಳಿ ಬರಲಿದೆ’’ಎಂದವರು ಹೇಳಿದರು.
 
ಅಲ್ಲದೆ ಕೊರೋನ ವೈರಸ್ ಇತರ ರೂಪಾಂತರಿತ ಪ್ರಭೇದಗಳು ಸೃಷ್ಟಿಯಾಗಿ ಮೂರನೆ ಅಲೆಯನ್ನು ಉಂಟು ಮಾಡುವ ಸಾಧ್ಯತೆಯೂ ಇದೆ ಎಂದು ರೆಡ್ಡಿ ತಿಳಿಸಿದ್ದಾರೆ.

ಡಾ. ರೆಡ್ಡಿ ಅವರು ಹಲವಾರು ಪ್ರಮುಖ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಆರೋಗ್ಯ ಅಧ್ಯಯನಗಳನ್ನು ನಡೆಸಿದ್ದು, ಹೃದ್ರೋಗ ಹಾಗೂ ಸಾಂಕ್ರಾಮಿಕ ರೋಗ ಚಿಕಿತ್ಸೆಯಲ್ಲಿ ತರಬೇತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News