ಮುಂದಿನ ತಿಂಗಳು ಸಕ್ರಿಯ ಕೋವಿಡ್-19 ಪ್ರಕರಣಗಳು 38-48 ಲಕ್ಷಕ್ಕೇರಬಹುದು: ಐಐಟಿ ವಿಜ್ಞಾನಿಗಳ ಎಚ್ಚರಿಕೆ
ಹೊಸದಿಲ್ಲಿ.ಎ.26: ದೇಶದಲ್ಲಿ ಕೊರೊನವೈರಸ್ ಸಾಂಕ್ರಾಮಿಕದ ಎರಡನೇ ಅಲೆಯು ತೀವ್ರವಾಗಿ ಹರಡುತ್ತಿರುವ ನಡುವೆಯೇ ಮುಂದಿನ ತಿಂಗಳ ಮಧ್ಯಭಾಗದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೇರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮೇ 14ರಿಂದ 18ರ ನಡುವಿನ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 38-48 ಲಕ್ಷಕ್ಕೇರಬಹುದು ಮತ್ತು ಮೇ 4ರಿಂದ 8ರ ಬಳಿಕ ದೇಶದಲ್ಲಿ ದೈನಂದಿನ ಹೊಸ ಸೋಂಕು ಪ್ರಕರಣಗಳ ಸಂಖ್ಯೆಯು 4.4 ಲಕ್ಷವನ್ನು ತಲುಪಬಹುದು ಎಂದು ತಮ್ಮ ಹಿಂದಿನ ಅಂದಾಜನ್ನು ಪರಿಷ್ಕರಿಸಿ ಐಐಟಿ ಕಾನ್ಪುರ ಮತ್ತು ಹೈದರಾಬಾದ್‌ಗಳ ವಿಜ್ಞಾನಿಗಳು ಹೇಳಿದ್ದಾರೆ.
ಸೋಮವಾರ ಭಾರತದಲ್ಲಿ 3,52,991 ಹೊಸ ಪ್ರಕರಣಗಳು ಮತ್ತು 2,812 ಸಾವುಗಳು ವರದಿಯಾಗಿವೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 28,13,658ಕ್ಕೇರಿದೆ.
ಮೇ ಮಧ್ಯಭಾಗದ ವೇಳೆಗೆ ಹತ್ತು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಸೇರ್ಪಡೆಗೊಳ್ಳಲಿವೆ ಎಂದು ತಾವು ರೂಪಿಸಿರುವ ‘ಸಸೆಪ್ಟಿಬಲ್,ಅನ್‌ಡಿಟೆಕ್ಟೆಡ್,ಟೆಸ್ಟೆಡ್(ಪಾಸಿಟಿವ್) ಆ್ಯಂಡ್ ರಿಮೂವ್ಡ್ ಅಪ್ರೋಚ್ (ಸೂತ್ರ)’ ಮಾದರಿಯ ಮೂಲಕ ವೈಜ್ಞಾನಿಕ ವಿಶ್ಲೇಷಣೆಯನ್ನು ಉಲ್ಲೇಖಿಸಿ ಈ ತಜ್ಞರ ತಂಡ ತಿಳಿಸಿದೆ.
ಕಳೆದ ವಾರ ತಜ್ಞರ ತಂಡವು ಮೇ 11 ಮತ್ತು 15ರ ನಡುವೆ ಒಟ್ಟು 33ರಿಂದ 35 ಲಕ್ಷ ಸಕ್ರಿಯ ಪ್ರಕರಣಗಳೊಂದಿಗೆ ಸಾಂಕ್ರಾಮಿಕವು ಉತ್ತುಂಗಕ್ಕೇರಬಹುದು ಮತ್ತು ಮೇ ಅಂತ್ಯದ ವೇಳೆಗೆ ತೀವ್ರವಾಗಿ ಇಳಿಮುಖಗೊಳ್ಳಲಿದೆ ಎಂದು ಹೇಳಿತ್ತು. ಇದೀಗ ತಂಡವು ತನ್ನ ಈ ಅಂದಾಜನ್ನು ಪರಿಷ್ಕರಿಸಿದೆ.
ಎಪ್ರಿಲ್ 15ರ ವೇಳೆಗೆ ದೇಶದಲ್ಲಿಯ ಸಕ್ರಿಯ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೇರಲಿದೆ ಎಂದು ಈ ತಂಡವು ತನ್ನ ವೈಜ್ಞಾನಿಕ ಮಾದರಿಯ ಮೂಲಕ ವಿಶ್ಲೇಷಣೆಯನ್ನು ಉಲ್ಲೇಖಿಸಿ ಹೇಳಿತ್ತು. ಆದರೆ ಈ ಭವಿಷ್ಯ ನಿಜವಾಗಿಲ್ಲ ಮತ್ತು ಸಾಂಕ್ರಾಮಿಕವು ದಿನೇ ದಿನೇ ಹೆಚ್ಚುತ್ತಲೇ ಇದೆ.
ನೂತನ ಅಂದಾಜನ್ನು ಐಐಟಿ ಕಾನ್ಪುರದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ ವಿಭಾಗದ ಪ್ರೊ.ಮಣಿಂದರ್ ಅಗರವಾಲ್ ಅವರು ರವಿವಾರ ಟ್ವೀಟಿಸಿದ್ದಾರೆ.
ಇದೇ ವೇಳೆ ಹರ್ಯಾಣದ ಅಶೋಕ ವಿವಿಯ ಗೌತಮ ಮೆನನ್ ಮತ್ತು ಅವರ ತಂಡವು ಮಾಡಿರುವ ಸ್ವತಂತ್ರ ಲೆಕ್ಕಾಚಾರಗಳಂತೆ ಎಪ್ರಿಲ್ ಮಧ್ಯದಿಂದ ಮೇ ಮಧ್ಯದವರೆಗಿನ ಅವಧಿಯಲ್ಲಿ ಸಾಂಕ್ರಾಮಿಕವು ಉತ್ತುಂಗಕ್ಕೇರಬಹುದು ಎಂದು ಹೇಳಿವೆ. ಕೋವಿಡ್-19 ಪ್ರಕರಣಗಳ ಇಂತಹ ಅಂದಾಜುಗಳನ್ನು ಅಲ್ಪಾವಧಿಗೆ ಮಾತ್ರ ನಂಬಬೇಕು ಎಂದು ಅವರು ಕಿವಿಮಾತನ್ನೂ ಹೇಳಿದ್ದಾರೆ.