ಮೇ 1ರಿಂದ ಕರ್ನಾಟಕ ಸೇರಿ 23 ರಾಜ್ಯಗಳಲ್ಲಿ ಕೊರೋನ ಲಸಿಕೆ ಉಚಿತ
ಹೊಸದಿಲ್ಲಿ, ಎ. 26: ಕರ್ನಾಟಕ ಸೇರಿದಂತೆ ದೇಶದ ಕನಿಷ್ಠ 23 ರಾಜ್ಯಗಳು ತಮ್ಮ ನಾಗರಿಕರಿಗೆ ಕೊರೋನ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿವೆ. ಕೆಲವು ರಾಜ್ಯಗಳು ಕೊರೋನ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡಲು ನಿಧರಿಸಿವೆ.
ಇತರ ರಾಜ್ಯಗಳು 18ರಿಂದ 45 ವರ್ಷದ ನಡುವಿನ ನಾಗರಿಕರಿಗೆ ಕೊರೋನ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಸ್ಪಷ್ಟನೆ ನೀಡಿದೆ. ಆದಾಗ್ಯೂ, 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡುವ ಕೇಂದ್ರ ಸರಕಾರದ ಕಾರ್ಯಕ್ರಮ ಮುಂದುವರಿಯಲಿದೆ.
ಕೊರೋನ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ ರಾಜ್ಯಗಳೆಂದರೆ, ಬಿಹಾರ್, ಜಾರ್ಖಂಡ್, ಉತ್ತರಪ್ರದೇಶ, ಪಂಜಾಬ್, ಹರ್ಯಾಣ, ಮಧ್ಯಪ್ರದೇಶ, ಚತ್ತೀಸ್‌ಗಢ, ಸಿಕ್ಕಿಂ, ಪಶ್ಚಿಮಬಂಗಾಳ, ಅಸ್ಸಾಂ, ಗೋವಾ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಒಡಿಶಾ, ದಿಲ್ಲಿ, ಜಮ್ಮು ಹಾಗೂ ಕಾಶ್ಮೀರ, ಹಿಮಾಚಲಪ್ರದೇಶ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಕರ್ನಾಟಕ. ಇಲ್ಲಿ ಪಟ್ಟಿ ಮಾಡಲಾದ ಹೆಚ್ಚಿನ ರಾಜ್ಯಗಳು ಕೊರೋನ ಲಸಿಕೆಯನ್ನು ಎಲ್ಲ ನಾಗರಿಕರಿಗೆ ಉಚಿತವಾಗಿ ನೀಡಲಾಗುವುದು ಎಂದು ಹೇಳಿವೆ.
ಆದರೆ, ಕೆಲವು ರಾಜ್ಯಗಳು 18ರಿಂದ 45 ವರ್ಷಗಳ ನಡುವಿನ ನಾಗರಿಕರಿಗೆ ಮಾತ್ರ ಕೊರೋನ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿವೆ. ಈ ರಾಜ್ಯಗಳಲ್ಲಿ ಜಮ್ಮು ಹಾಗೂ ಕಾಶ್ಮೀರ, ಹಿಮಾಚಲಪ್ರದೇಶ, ಗೋವಾ, ಸಿಕ್ಕಿಂ, ಕರ್ನಾಟಕ, ಜಾರ್ಖಂಡ್ ಹಾಗೂ ಆಂಧ್ರಪ್ರದೇಶ ಸೇರಿದೆ. ರಾಜ್ಯಗಳು ಲಸಿಕೆಗಳನ್ನು ಎರಡು ಪ್ರಮುಖ ಉತ್ಪಾದಕರಿಂದ ಖರೀದಿಸಲಿವೆ. ರಾಜ್ಯ ಸರಕಾರಕ್ಕೆ ಪ್ರತಿ ಡೋಸ್ 400 ರೂಪಾಯಿಯಂತೆ ಕೋವಿಡ್-19 ಲಸಿಕೆ ಕೋವಿಶೀಲ್ಡ್ ಪೂರೈಕೆ ಮಾಡಲಾಗುವುದು ಎಂದು ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ. ಕೊವ್ಯಾಕ್ಸಿನ್ ಉತ್ಪಾದಕ ಭಾರತ್ ಬಯೋಟೆಕ್ ತನ್ನ ಲಸಿಕೆಯನ್ನು ರಾಜ್ಯ ಸರಕಾರಕ್ಕೆ 600 ರೂಪಾಯಿಯಲ್ಲಿ ನೀಡಲಾಗುವುದು ಎಂದು ಹೇಳಿದೆ.