ದಿಲ್ಲಿ: ಅಧಿಕೃತ ದಾಖಲೆಗಳಲ್ಲಿ ನಾಪತ್ತೆಯಾಗಿರುವ 1,೦೦೦ಕ್ಕೂ ಅಧಿಕ ಕೋವಿಡ್ ಸಾವುಗಳು !
ಹೊಸದಿಲ್ಲಿ: ರಾಜಧಾನಿ ದಿಲ್ಲಿಯ ವಿವಿಧೆಡೆಗಳಲ್ಲಿ ಕಳೆದ ವಾರದಿಂದ ನಡೆಯುತ್ತಿರುವ ನೂರಾರು ಅಂತ್ಯಕ್ರಿಯೆಗಳನ್ನು ಗಮನಿಸಿದಾಗ ಅಧಿಕೃತ ಅಂಕಿ ಅಂಶಗಳಲ್ಲಿ ನಮೂದಿಸಲಾಗಿರುವ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೋವಿಡ್‍ಗೆ ಬಲಿಯಾಗಿರಬಹುದೆಂಬ ಶಂಕೆ ವ್ಯಾಪಕವಾಗಿದೆ. ಎನ್‍ಡಿಟಿವಿ ವರದಿಗಾರರು ನಗರದ ಏಳು ರುದ್ರಭೂಮಿಗಳಿಗೆ ಭೇಟಿ ನೀಡಿ ನಂತರ ಸ್ಥಳೀಯಾಡಳಿತದ ಕಚೇರಿಗೂ ಭೇಟಿ ನೀಡಿದ ಸಂದರ್ಭ ಕನಿಷ್ಠ 1,150 ಕೋವಿಡ್ ಸಾವು ಪ್ರಕರಣಗಳು ಅಧಿಕೃತ ಅಂಕಿಸಂಖ್ಯೆಗಳಲ್ಲಿ ಸೇರ್ಪಡೆಯಾಗಿಲ್ಲ ಎಂದು ತಿಳಿದು ಬಂದಿದೆ.
ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ ನಡೆಸುವ 26 ರುದ್ರಭೂಮಿಗಳ ಸಂಗ್ರಹಿಸಲಾಗಿರುವ ದಾಖಲೆಗಳ ಪ್ರಕಾರ ಎಪ್ರಿಲ್ 18 ಹಾಗೂ 24ರ ನಡುವೆ 3,096 ಕೋವಿಡ್ ಸೋಂಕಿತರ ಅಂತ್ಯಕ್ರಿಯೆಗಳು ನಡೆದಿವೆ. ಆದರೆ ದಿಲ್ಲಿ ಸರಕಾರ ಇದೇ ಅವಧಿಗೆ ಬಿಡುಗಡೆಗೊಳಿಸಿದ ಅಂಕಿಅಂಶಗಳು 1,938 ಸಾವುಗಳು ಸಂಭವಿಸಿವೆ ಎಂದು ತಿಳಿಸುತ್ತಿದ್ದು ಸರಿಸುಮಾರು 1,158 ಕೋವಿಡ್ ಸಾವುಗಳು ಅಧಿಕೃತ ಅಂಕಿಅಂಶಗಳಲ್ಲಿ ಸೇರ್ಪಡೆಯಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.
ಆಸ್ಪತ್ರೆಗಳಿಂದ ರುದ್ರಭೂಮಿಗಳಿಗೆ ಸಾಗಿಸಲಾಗುವ ಕಳೇಬರಗಳನ್ನು ಮಾತ್ರ ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ ಗಣನೆಗೆ ತೆಗೆದುಕೊಳ್ಳುತ್ತದೆ. ಆದರೆ ತಮ್ಮ ಮನೆಗಳಲ್ಲಿಯೇ ಕೋವಿಡ್ ಸೋಂಕಿಗೆ ಬಲಿಯಾಗುವವರ ವಿವರಗಳನ್ನು ರುದ್ರಭೂಮಿಗಳಲ್ಲಿ ನಮೂದಿಸುವಾಗ ಅವುಗಳನ್ನು ಕೋವಿಡ್ ಸಾವು ಎಂದು ನಮೂದಿಸಲಾಗುತ್ತಿಲ್ಲ ಎಂದು ಗಝೀಪುರ್ ರುದ್ರಭೂಮಿಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಕೋವಿಡ್ ನಿಂದ ಮನೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಂಬಂಧಿಗಳು ತಿಳಿಸಿದಲ್ಲಿ ಶಂಕಿತ ಕೋವಿಡ್ ರೋಗಿ ಎಂದು ದಾಖಲೆಗಳಲ್ಲಿ ನಮೂದಿಸಲಾಗುತ್ತದೆ ಆದರೆ ಅಂತ್ಯಕ್ರಿಯೆ ಕೋವಿಡ್ ಮಾರ್ಗಸೂಚಿಯಂತೆಯೇ ನಡೆಯುತ್ತದೆ ಎಂದು ತಿಳಿದು ಬಂದಿದೆ.