×
Ad

ಪರಿಶಿಷ್ಟ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಆನ್‍ಲೈನ್ ಕ್ಲಾಸ್‍ನಲ್ಲಿ ನಿಂದಿಸಿದ ಐಐಟಿ ಖರಗಪುರ್ ಪ್ರೊಫೆಸರ್

Update: 2021-04-27 15:00 IST

ಹೊಸದಿಲ್ಲಿ: ಆನ್‍ಲೈನ್ ಕ್ಲಾಸ್ ವೇಳೆ ರಾಷ್ಟ್ರಗೀತೆಗೆ ಎದ್ದು ನಿಂತಿಲ್ಲ ಹಾಗೂ ಭಾರತ್ ಮಾತಾ ಕಿ ಜೈ ಹೇಳಿಲ್ಲ ಎಂಬ ಕಾರಣಕ್ಕಾಗಿ ವಿದ್ಯಾರ್ಥಿಯೊಬ್ಬನ್ನು ʼಬ್ಲಡಿ ಬಾಸ್ಟರ್ಡ್ʼ ಎಂದು ಐಐಟಿ-ಖರಗಪುರ್‍ನ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ ಸೀಮಾ ಸಿಂಗ್ ಎಂಬಾಕೆ ನಿಂದಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

"ಈ ದೇಶಕ್ಕೆ ನೀವು ಮಾಡಬಹುದಾದ ಕನಿಷ್ಠ ಕೆಲಸ ಇದು. ನೀವು ತರಗತಿಯಿಂದ ಹೊರನಡೆಯದೇ ಇದ್ದರೆ ಸೊನ್ನೆ ನೀಡುತ್ತೇನೆ. ನಿಮಗೆ 20 ಅಂಕಗಳು ಇವೆ ಆದರೆ ಎಲ್ಲಾ 120 ಮಂದಿ ತರಗತಿಯಿಂದ ಹೊರನಡೆಯದೇ ಇದ್ದರೆ ಸೊನ್ನೆ ನೀಡುತ್ತೇನೆ. ರಾಷ್ಟ್ರಗೀತೆಗೆ ಗೌರವ ಸೂಚಿಸಿ ನೀವು ಕೇವಲ ಎರಡು ನಿಮಿಷ ನಿಲ್ಲಬೇಕು, ಅದನ್ನೂ ಮಾಡಲಾಗದೇ? ಬ್ಲಡಿ ಬಾಸ್ಟರ್ಡ್, ಇದಕ್ಕೆ ಹೆತ್ತವರೂ ಕಾರಣ, ನಿನಗೆ ನಾಚಿಕೆಯಿದೆಯೇ, ನೀವೆಲ್ಲರೂ ಶಾಲೆಯಲ್ಲಿದ್ದೀರಾ  ಬ್ಲಡ್ ಬಾಸ್ಟಡ್ರ್ಸ್" ಎಂದು ಆಕೆ ವಿದ್ಯಾರ್ಥಿಗಳನ್ನು ನಿಂದಿಸುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

ಖರಗಪುರ್ ಐಐಟಿಯ ಹ್ಯುಮಾನಿಟೀಸ್ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಸಿಂಗ್  ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಹಾಗೂ  ಭಿನ್ನ ಚೇತನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪ್ರಿಪರೇಟರಿ ತರಗತಿಗಳನ್ನು ನಡೆಸುತ್ತಿರುವ ವೇಳೆ ಈ ಘಟನೆ ನಡೆದಿದೆ.

ಇನ್ನೊಂದು ವೀಡಿಯೋದಲ್ಲಿ ಇದೇ ಪ್ರೊಫೆಸರ್,  ಅಜ್ಜ ತೀರಿ ಹೋದರೆಂದು ಕೆಲ ದಿನಗಳ ರಜೆ ಕೇಳಿ ಇಮೇಲ್ ಬರೆದಿರುವ ವಿದ್ಯಾರ್ಥಿನಿಯೊಬ್ಬಳನ್ನು ತರಾಟೆಗೆ ತೆಗೆದುಕೊಳ್ಳುವುದು ಕೇಳಿಸುತ್ತದೆ.

ಈ ವಿದ್ಯಮಾನ ಬಹುಜನ ಸಮುದಾಯ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದ್ದು #ಎಂಡ್_ಕಾಸ್ಟೀಸಂ_ಇನ್_ಐಐಟಿ ಸೋಮವಾರ ಟ್ವಿಟ್ಟರ್‍ನಲ್ಲಿ ಟ್ರೆಂಡಿಂಗ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News