ಬಂಧಿತ ಕೇರಳ ಪತ್ರಕರ್ತ ಸಿದ್ದೀಖ್ ಕಪ್ಪನ್ ಅವರ ವೈದ್ಯಕೀಯ ದಾಖಲೆಗಳನ್ನು ಹಾಜರು ಪಡಿಸಲು ಸುಪ್ರೀಂ ಕೋರ್ಟ್ ಸೂಚನೆ

Update: 2021-04-27 10:44 GMT

ಹೊಸದಿಲ್ಲಿ: ಕಳೆದ ವರ್ಷ ಹತ್ರಸ್ ಸಾಮೂಹಿಕ ಅತ್ಯಾಚಾರ  ಘಟನೆ ಕುರಿತು ವರದಿ ಮಾಡಲೆಂದು ಹತ್ರಸ್‍ಗೆ ತೆರಳುತ್ತಿದ್ದ ವೇಳೆ ಬಂಧಿತರಾದ ಹಾಗೂ ಪ್ರಸಕ್ತ ಕೋವಿಡ್ ಚಿಕಿತ್ಸೆಗಾಗಿ ಮಥುರಾದ ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುವ ಕೇರಳದ ಪತ್ರಕರ್ತ ಸಿದ್ದೀಖ್ ಕಪ್ಪನ್ ಅವರ ವೈದ್ಯಕೀಯ ವರದಿಗಳನ್ನು ನೀಡುವಂತೆ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಇಂದು ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದೆ.

ಕಪ್ಪನ್ ಅವರನ್ನು ಮಥುರಾ ಆಸ್ಪತ್ರೆಯಲ್ಲಿ ಮಂಚಕ್ಕೆ ಕಟ್ಟಿ ಹಾಕಲಾಗಿದೆ ಅವರನ್ನು ರಕ್ಷಿಸಿ ಎಂದು ಅವರ ಪತ್ನಿ ಸಲ್ಲಿಸಿರುವ ಅಪೀಲನ್ನು ಬುಧವಾರ ವಿಚಾರಣೆ ನಡೆಸುವುದಾಗಿ  ಪೀಠ ಹೇಳಿದೆ.

ಅಕ್ಟೋಬರ್ 2020ರಿಂದ ಜೈಲಿನಲ್ಲಿರುವ ಕಪ್ಪನ್ ಅವರ ವಿರುದ್ಧ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯನ್ನೂ ಹೇರಲಾಗಿದೆ.

ತಮ್ಮ ಪತಿಯನ್ನು ಮಥುರಾದ ಕೆ ಎಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಂಚಕ್ಕೆ ಪ್ರಾಣಿಯಂತೆ  ಕಟ್ಟಿ ಹಾಕಲಾಗಿದೆ ಎಂದು ಆರೋಪಿಸಿ ಕಪ್ಪನ್ ಅವರ ಪತ್ನಿ ರೈಹಾನತ್ ಕಪ್ಪನ್ ಮುಖ್ಯ ನ್ಯಾಯಮೂರ್ತಿಗೆ ಶನಿವಾರ  ಪತ್ರ ಬರೆದಿದ್ದರು.

ಮಂಗಳವಾರದ ವಿಚಾರಣೆ ವೇಳೆ ಕಪ್ಪನ್ ಅವರ ಪತ್ನಿಯ ಆರೋಪವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅಲ್ಲಗಳೆದರು.

"ಆತ ಯುಎಪಿಎ ಆರೋಪಿ. ಆತನ ವಿರುದ್ಧ ಚಾರ್ಜ್ ಶೀಟ್ ಬಾಕಿಯಿದೆ  ಹಾಗೂ ಆತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎಲ್ಲಾ ಇತರ ಆರೋಪಿಗಳು ವಿಚಾರಣಾ ನ್ಯಾಯಾಲಯದ ಮುಂದೆ ಸಾಮಾನ್ಯ ಜಾಮೀನು ಅಪೀಲು ಸಲ್ಲಿಸಿದ್ದಾರೆ, ಕಪ್ಪನ್ ಕೂಡ ಅಲ್ಲಿಯೇ ಅಪೀಲು ಸಲ್ಲಿಸಲಿ" ಎಂದು ಮೆಹ್ತಾ ಹೇಳಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ರೈಹಾನತ್ ಕಪ್ಪನ್ ಅವರ ವಕೀಲ ವಿಲ್ಸ್ ಮ್ಯಾಥ್ಯೂಸ್,  ಕಪ್ಪನ್ ಅವರನ್ನು ಸರಪಳಿ ಹಾಕಿ ಇರಿಸದಂತೆ ಉತ್ತರ ಪ್ರದೇಶ ಸರಕಾರಕ್ಕೆ ಕೋರಿ ಈ ಅಪೀಲು ಸಲ್ಲಿಸಲಾಗಿದೆ ಎಂದರು. "ಅವರ ಸ್ಥಿತಿ ಗಂಭೀರವಾಗಿದೆ. ಅವರಿಗೆ  ಕೋವಿಡ್ ಸೋಂಕು ದೃಢಪಟ್ಟಿದೆ, ಅವರು ಎಪ್ರಿಲ್ 20ರಂದು ಜೈಲಿನ ಶೌಚಾಲಯದಲ್ಲಿ ಬಿದ್ದಿದ್ದಾರೆ.  ಆಸ್ಪತ್ರೆಯಲ್ಲಿ ಅವರನ್ನು ಸರಪಳಿ ಹಾಕಿ ಇರಿಸಲಾಗಿರುವುದರಿಂದ ಅವರಿಗೆ ಶೌಚಾಲಯಕ್ಕೆ ಕೂಡ ಹೋಗಲು ಸಾಧ್ಯವಾಗುತ್ತಿಲ್ಲ" ಎಂದು ಮ್ಯಾಥ್ಯೂಸ್ ಹೇಳಿದರಲ್ಲದೆ ಕಪ್ಪನ್ ಅವರ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುವಂತೆಯೂ ಕೋರಿದರು.

ಅಂತೆಯೇ ನ್ಯಾಯಾಲಯ  ಆದೇಶಿಸಿದೆಯಲ್ಲದೆ ಮಂಗಳವಾರ ಸಂಜೆಯೊಳಗಾಗಿ ದಾಖಲೆಗಳನ್ನು  ನ್ಯಾಯಾಧೀಶರುಗಳು ಹಾಗೂ ಮ್ಯಾಥ್ಯೂಸ್ ಅವರಿಗೆ ದೊರೆಯುವಂತೆ ಮಾಡಲೂ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News