×
Ad

ಕೋವಿಡ್ ಲಸಿಕೆಯ ದರನಿಗದಿಯ ಹಿಂದಿನ ತರ್ಕಬದ್ಧತೆ ವಿವರಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

Update: 2021-04-27 19:53 IST

ಹೊಸದಿಲ್ಲಿ,ಎ.27: ಕೊರೋನ ವೈರಸ್ ಲಸಿಕೆಗಳು ಮತ್ತು ಇತರ ಅಗತ್ಯ ವಸ್ತುಗಳ ದರಗಳನ್ನು ಯಾವ ಆಧಾರದಲ್ಲಿ ನಿಗದಿಗೊಳಿಸಲಾಗಿದೆ ಮತ್ತು ಅದರ ಹಿಂದಿನ ತರ್ಕಬದ್ಧತೆ ಏನು ಎನ್ನುವುದನ್ನು ಅಫಿಡವಿಟ್ವೊಂದರಲ್ಲಿ ಸ್ಪಷ್ಟಪಡಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಮೂಕಪ್ರೇಕ್ಷಕನಾಗಿರಲು ಸಾಧ್ಯವಿಲ್ಲ. ಅದು ಪೂರಕ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ ಎಂದು ನ್ಯಾ.ಡಿ.ವೈ.ಚಂದ್ರಚೂಡ ನೇತೃತ್ವದ ಪೀಠವು ಹೇಳಿತು.


ಆಮ್ಲಜನಕ ಕೊರತೆ ಸೇರಿದಂತೆ ರಾಜ್ಯಗಳಲ್ಲಿಯ ಆರೋಗ್ಯ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಆಯಾ ರಾಜ್ಯ ಸರಕಾರಗಳು ಗುರುವಾರ ಸಂಜೆ ಆರು ಗಂಟೆಯೊಳಗೆ ತಮ್ಮ ಉತ್ತರಗಳನ್ನು ಸಲ್ಲಿಸಬೇಕು ಎಂದು ನಿರ್ದೇಶ ನೀಡಿದ ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಶುಕ್ರವಾರ ಅಪರಾಹ್ನಕ್ಕೆ ನಿಗದಿಗೊಳಿಸಿತು.

ಆಯಾ ರಾಜ್ಯಗಳಲ್ಲಿ ಉಚ್ಚ ನ್ಯಾಯಾಲಯಗಳು ಪ್ರಕರಣಗಳ ವಿಚಾರಣೆ ನಡೆಸುತ್ತಿರುವುದರಿಂದ ಮತ್ತು ತಳಮಟ್ಟದ ಸ್ಥಿತಿ ಅವುಗಳಿಗೆ ಚೆನ್ನಾಗಿ ಗೊತ್ತಿರುವುದರಿಂದ ಯಾವುದೇ ನಿರ್ದೇಶಗಳನ್ನು ಹೊರಡಿಸಲು ಅವುಗಳನ್ನು ನಿರ್ಬಂಧಿಸುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.

ಭಾರತ್ ಬಯೊಟೆಕ್ ತನ್ನ ಕೋವ್ಯಾಕ್ಸಿನ್ ಲಸಿಕೆಯ ಪ್ರತಿ ಡೋಸ್ಗೆ ರಾಜ್ಯ ಸರಕಾರಗಳಿಗೆ 600 ರೂ.ಮತ್ತು 1,200 ರೂ.ಗಳ ದರವನ್ನು ನಿಗದಿಗೊಳಿಸಿದ್ದರೆ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್ಗೆ ರಾಜ್ಯ ಸರಕಾರಗಳಿಗೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ.ದರವನ್ನು ನಿಗದಿಗೊಳಿಸಿದೆ.
ಇವೆರಡೂ ಲಸಿಕೆಗಳು ಕೇಂದ್ರ ಸರಕಾರಕ್ಕೆ ಪ್ರತಿ ಡೋಸ್ ಗೆ 150 ರೂ. ದರದಲ್ಲಿ ಲಭ್ಯವಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News