ಹಿರಿಯ ಅಧಿಕಾರಿಯ ಲೈಂಗಿಕ ಕಿರುಕುಳದ ವಿರುದ್ಧ ಜಮ್ಮುಕಾಶ್ಮೀರ ಹೈಕೋರ್ಟ್ ಗೆ ಐಎಎಫ್ ಪೈಲಟ್ ಮೊರೆ

Update: 2021-04-27 16:37 GMT

ಹೊಸದಿಲ್ಲಿ,ಎ.27: ತನ್ನ ಫ್ಲೈಟ್ ಕಮಾಂಡರ್ನಿಂದ ಲೈಂಗಿಕ ಕಿರುಕುಳ ಮತ್ತು ಆಂತರಿಕ ದೂರುಗಳ ಸಮಿತಿಯು ನಡೆಸಿದ್ದ ನ್ಯಾಯಯುತವಲ್ಲದ ವಿಚಾರಣೆಯ ವಿರುದ್ಧ ಭಾರತೀಯ ವಾಯುಪಡೆಯ ಮಹಿಳಾ ಪೈಲಟ್ ಓರ್ವರು ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ಮೆಟ್ಟಿಲುಗಳನ್ನೇರಿದ್ದಾರೆ. ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ವಾಯುಪಡೆಯ ಅಧಿಕಾರಿಗಳಿಗೆ ನೋಟಿಸ್ಗಳನ್ನು ಹೊರಡಿಸಿರುವ ಉಚ್ಚ ನ್ಯಾಯಾಲಯವು ನಾಲ್ಕು ವಾರಗಳಲ್ಲಿ ಉತ್ತರಗಳನ್ನು ಸಲ್ಲಿಸುವಂತೆ ಸೂಚಿಸಿದೆ.

ಆರೋಪಿ ಅಧಿಕಾರಿಯು ಮಹಿಳಾ ಪೈಲಟ್ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಷ್ಟೇ ಅಲ್ಲ,ಲೈಂಗಿಕ ಕ್ರಿಯೆಗೆ ಪದೇಪದೇ ಒತ್ತಾಯಿಸುತ್ತಿದ್ದ ಮತ್ತು ಆಕೆಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಸಶಸ್ತ್ರ ಪಡೆಗಳ ಅಂತರಿಕ ದೂರುಗಳ ಸಮಿತಿಯು ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ (ತಡೆ,ನಿಷೇಧ ಮತ್ತು ಇತ್ಯರ್ಥ) ಕಾಯ್ದೆ,2013ರಡಿ ವಿಚಾರಣೆ ನಡೆಸಿದ್ದ ರೀತಿಯನ್ನೂ ಅರ್ಜಿದಾರರು ಆಕ್ಷೇಪಿಸಿದ್ದಾರೆ. ಅರ್ಜಿದಾರರಿಗೆ ಸುಮಾರು 300 ಪ್ರಶ್ನೆಗಳನ್ನು ಕೇಳಲಾಗಿತ್ತು ಮತ್ತು ಅಶ್ಲೀಲ ಹಾಗೂ ಅಗೌರವವನ್ನುಂಟು ಮಾಡುವ ಪ್ರಶ್ನೆಗಳು ಇದರಲ್ಲಿ ಸೇರಿದ್ದವು ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News