ಕುಂಭಮೇಳ ಎಫೆಕ್ಟ್: ಉತ್ತರಾಖಂಡದಾದ್ಯಂತ‌ 25 ದಿನಗಳಲ್ಲಿ 1,800% ಹೆಚ್ಚಾದ ಕೋವಿಡ್‌ ಪ್ರಕರಣಗಳು !

Update: 2021-04-28 07:23 GMT

ಹರಿದ್ವಾರ: ದೇಶದಾದ್ಯಂತ ಜನರು ಕೋವಿಡ್‌ ನಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದು, ದೈನಂದಿನ ಪ್ರಕರಣಗಳ ಸಂಖ್ಯೆ ಮೂರೂವರೆ ಲಕ್ಷ ದಾಟಿದೆ. ಕೋವಿಡ್‌ ಸಾಂಕ್ರಾಮಿಕದ ನಡುವೆಯೂ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಕುಂಭಮೇಳದ ಕಾರಣದಿಂದ ಸದ್ಯ ಕೋವಿಡ್‌ ಪ್ರಕರಣಗಳ ಸಂಖ್ಯೆ ಮಾರ್ಚ್‌ 31ರಿಂದ ಎಪ್ರಿಲ್‌ 24ರ ನಡುವೆ 1800% ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. 

ಕುಂಭಮೇಳಕ್ಕಿಂತ ಮುಂಚೆ ಮಾರ್ಚ್‌ 31ರಂದು ಉತ್ತರಾಖಂಡದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,863 ಇತ್ತು. ಆದರೆ ಎಪ್ರಿಲ್‌ 1ರಿಂದ ಕುಂಭ ಮೇಳ ಪ್ರಾರಂಭವಾದ ಬಳಿಕ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 33,330 ದಾಟಿದೆ. ಸರಕಾರಿ ದಾಖಲೆಗಳ ಪ್ರಕಾರ ಕುಂಭಮೇಳದಲ್ಲಿ ಒಟ್ಟು 35 ಲಕ್ಷಕ್ಕೂ ಹೆಚ್ಚು ಜನರು ಕುಂಭಮೇಳದಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಈ ಕುರಿತು ಮಾತನಾಡಿದ ಸರಕಾರದ ವಕ್ತಾರ ಹಾಗೂ ಸಚಿವ ಸುಬೋಧ್‌ ಯುನಿಯಾಲ್‌, "ನಾವು ನಮ್ಮಿಂದಾಗುವ ಪ್ರಯತ್ನ ಮಾಡುತ್ತಿದ್ದೇವೆ. ಉತ್ತರಾಖಂಡಕ್ಕೆ ಆಗಮಿಸುತ್ತಿರುವ ಪ್ರವಾಸಿಗರಿಂದ ಈ ಪರಿಸ್ಥಿತಿ ಉಂಟಾಗಿದೆ" ಎಂದು ಹೇಳಿಕೆ ನೀಡಿದ್ದಾಗಿ ತಿಳಿದು ಬಂದಿದೆ. ಮಂಗಳವಾರ ನಡೆದಿದ್ದ ಶಾಹಿ ಸ್ನಾನದಲ್ಲೂ ಹಲವಾರು ಮಂದಿ ಭಾಗವಹಿಸಿದ್ದರು. ಈಗಾಗಲೇ ಹಲವಾರು ಅಖಾಡಗಳ ಮುಖ್ಯಸ್ಥರಿಗೆ ಕೋವಿಡ್‌ ಸೋಂಕು ತಗುಲಿದ್ದ ಕಾರಣ ಅವರು ಕುಂಭ ಮೇಳ ಸಮಾಪ್ತಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News