ಬೆಡ್- ಆಕ್ಸಿಜನ್ ಗೆ ಪರದಾಟ, ಕ್ಯೂ ನಿಂತ ಆಂಬ್ಯುಲೆನ್ಸ್, ಶವಗಳ ರಾಶಿ ನಡುವೆ ಇದೆಂತಹ ಐಪಿಎಲ್ ?

Update: 2021-04-28 10:54 GMT
ಸಾಂದರ್ಭಿಕ ಚಿತ್ರ

ಮುಂಬೈ: ದೇಶದೆಲ್ಲೆಡೆ ಕೊರೋನ ವೈರಸ್ ನ 2ನೇ ಅಲೆ ವೇಗವಾಗಿ ಬೀಸುತ್ತಿರುವ ನಡುವೆಯೇ ಈ ತಿಂಗಳ ಆರಂಭದಲ್ಲಿ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿದ್ದು, ಈವರೆಗೆ ಸುಮಾರು 22ರಷ್ಟು ಪಂದ್ಯಗಳು ನಡೆದಿವೆ. ಇದರ ಮಧ್ಯೆಯೇ ದೇಶದೆಲ್ಲೆಡೆ ಕೊರೋನ ಆರ್ಭಟ ಮತ್ತಷ್ಟು ಹೆಚ್ಚಿದ್ದು, ದಾಖಲೆಯ ಪ್ರಮಾಣದಲ್ಲಿ ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗುತ್ತಿವೆ. ಬೆಡ್, ಆಕ್ಸಿಜನ್ ಇಲ್ಲದೆ ಪರದಾಡುತ್ತಿರುವ ಘಟನೆಗಳೂ ಅಲ್ಲಲ್ಲಿ ಕಂಡುಬರುತ್ತಿವೆ.

ದೇಶದಲ್ಲಿ ಸದ್ಯ ದೈನಂದಿನ 3 ಲಕ್ಷದಷ್ಟು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ ಹಾಗೂ 2 ಸಾವಿರದಷ್ಟು ಮಂದಿ ಪ್ರತಿದಿನ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಎಪ್ರಿಲ್ ತಿಂಗಳಲ್ಲೇ ಸುಮಾರು 35 ಸಾವಿರ ಮಂದಿ ಕೊರೋನದಿಂದ ಸಾವನ್ನಪ್ಪಿದ್ದಾರೆ. ಪಾಸಿಟಿವ್ ಮತ್ತು ಸಾವಿನ ಪ್ರಕರಣಗಳಲ್ಲಿ ಪ್ರತಿದಿನವೂ ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿದ್ದು, ಮೊದಲ ಅಲೆಗಿಂತಲೂ ಭೀಕರವಾಗಿ ಎರಡನೇ ಅಲೆ ಗೋಚರಿಸುತ್ತಿದೆ.

ಈ ಪೈಕಿ ರಾಷ್ಟ್ರ ರಾಜಧಾನಿ ದಿಲ್ಲಿ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾಜ್ ಸೇರಿ ಹಲವು ರಾಜ್ಯಗಳಲ್ಲಿ ಕೋವಿಡ್ ಮಿತಿಮೀರಿ ಹರಡುತ್ತಿದ್ದು, ಹಲವೆಡೆ ಲಾಕ್ ಡೌನ್, ಕೊರೋನ ಕರ್ಫ್ಯೂ ಸೇರಿದಂತೆ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಸಭೆ-ಸಮಾರಂಭಗಳು, ರಾಜಕೀಯ ಕಾರ್ಯಕ್ರಮಗಳು, ಚುನಾವಣಾ ವಿಜಯೋತ್ಸವಗಳನ್ನು ಸ್ಥಗಿತಗೊಳಿಸಲಾಗಿದೆ. ಧಾರ್ಮಿಕ ಕೇಂದ್ರಗಳು, ಶಾಲೆ- ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಆದರೆ ಕೊರೋನ ಸೋಂಕಿನ ಅರ್ಭಟ ಜೋರಾಗಿರುವ ಮಧ್ಯೆಯೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿ ಸುಗಮವಾಗಿ ನಡೆಯುತ್ತಿದ್ದು, ಕೆಲ ಆಟಗಾರರು, ಸಿಬ್ಬಂದಿಗೆ ಸೋಂಕು ದೃಢಪಟ್ಟರೂ ಐಪಿಎಲ್ ಎಂದಿನಂತೆ ಮುಂದುವರಿದಿದೆ.

ಸೋಂಕು ಹೆಚ್ಚುತ್ತಿರುವ ಕಾರಣ ಕಳೆದ ಬಾರಿಯಂತೆ ಈ ಬಾರಿಯೂ ಐಪಿಎಲ್ ವಿದೇಶದಲ್ಲಿ ಹಮ್ಮಿಕೊಳ್ಳುವ ಅಥವಾ ಮುಂದೂಡುವ ಬಗ್ಗೆ ವದಂತಿಗಳಿದ್ದರೂ ಆಯೋಜಕರು ಏಳು ವಾರಗಳ ಕಾಲ ನಡೆಯುವ ಐಪಿಎಲ್ ಮುಂದುವರಿಸಲು ಸಜ್ಜಾಗಿದ್ದಾರೆ. ಬಿಸಿಸಿಐ ಕೂಡಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಟೂರ್ನಿ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಆಟಗಾರರು, ಸಿಬ್ಬಂದಿಗೆ ಸೋಂಕು

ಐಪಿಎಲ್ ಆರಂಭಕ್ಕೂ ಮುನ್ನವೇ ಬೆಂಗಳೂರು ತಂಡದ ಆಟಗಾರರಾದ ದೇವದತ್ತ ಪಡಿಕ್ಕಲ್, ಡೇನಿಯಲ್ ಸ್ಯಾಮ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನ ಅಕ್ಸರ್ ಪಟೇಲ್ ಗೆ ಕೋವಿಡ್ ದೃಢಪಟ್ಟಿತ್ತು. ಜೊತೆಗೆ ವಾಂಖೆಡೆ ಕ್ರೀಡಾಂಗಣದ 10 ಮಂದಿ ಸಿಬ್ಬಂದಿ ಮತ್ತು ಆರು ಮಂದಿ ಕಾರ್ಯಕ್ರಮ ಸಂಯೋಜಕರಲ್ಲಿ ಕೋವಿಡ್19 ಸೋಂಕು ಪತ್ತೆಯಾಗಿತ್ತು.

ಐಪಿಎಲ್ ತೊರೆದ ಅಶ್ವಿನ್, ವಿದೇಶಿ ಆಟಗಾರರು

ಕೋವಿಡ್ ಕಾರಣದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಖ್ಯಾತ ಸ್ಪಿನ್ನರ್ ಆರ್.ಅಶ್ವಿನ್, 2021ನೇ ಸಾಲಿನ ಐಪಿಎಲ್ ನಿಂದ ವಿರಮಿಸುವುದಾಗಿ ಪ್ರಕಟಿಸಿದ್ದಾರೆ. ''ಪ್ರಸಕ್ತ ಐಪಿಎಲ್ ನಿಂದ ವಿರಮಿಸಲು ನಿರ್ಧರಿಸಿದ್ದೇನೆ. ನನ್ನ ಕುಟುಂಬ ಹಾಗೂ ಸಂಬಂಧಿಕರು ಕೋವಿಡ್-19 ವಿರುದ್ಧ ಹೋರಾಡುತ್ತಿದ್ದಾರೆ, ಈ ಸಂಕಷ್ಟದ ಸಮಯದಲ್ಲಿ ನಾನು ಅವರನ್ನು ಬೆಂಬಲಿಸಬೇಕಾಗಿದೆ" ಎಂದು ಅಶ್ವಿನ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಜೊತೆಗೆ, ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ವೇಗಿ ಆಂಡ್ರ್ಯೂ ಟೈ, ಆರ್ಸಿಬಿ ಆಟಗಾರರಾದ ಆ್ಯಡಂ ಝಾಂಪ, ಕೇನ್ ರಿಚರ್ಡ್ಸನ್ ಈಗಾಗಲೇ ಐಪಿಎಲ್ ತೊರೆದು ತವರಿಗೆ ಮರಳಿದ್ದಾರೆ. ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ ಕಾರಣದಿಂದಾಗಿ ಇವರು ತವರಿಗೆ ಮರಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಒಂದೆಡೆ ಕೆಲ ಆಟಗಾರರು, ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದ್ದು, ಮತ್ತೊಂದೆಡೆ ಹಲವು ಆಟಗಾರರು ಕೋವಿಡ್ ಭೀತಿಯಿಂದ ಟೂರ್ನಿಯಿಂದಲೇ ಹೊರನಡೆದಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಐಪಿಎಲ್ ಮುಂದುವರಿದಿದ್ದು ಹಲವರ ಆತಂಕಕ್ಕೆ ಕಾರಣವಾಗಿದೆ.

ಅಭಿನವ್ ಬಿಂದ್ರಾ ಮಾತಿನ ಚಾಟಿ

ಕೊರೋನದ ನಡುವೆ ಐಪಿಎಲ್ ನಡೆಯುತ್ತಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಒಲಿಂಪಿಕ್ಸ್ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, ಭಾರತದ ಕ್ರೀಡಾಪಟುಗಳು ಅದರಲ್ಲೂ ಮುಖ್ಯವಾಗಿ ಕ್ರಿಕೆಟಿಗರು ಬಾಹ್ಯ ಜಗತ್ತಿನ ಬೆಳವಣಿಗೆಗಳಿಗೂ ತಮಗೂ ಸಂಬಂಧವೇ ಇಲ್ಲ ಎಂದು ಕಣ್ಣು, ಕಿವಿ ಮುಚ್ಚಿಕೊಂಡಿರುವಂತಿಲ್ಲ ಎಂದು ಛಾಟಿ ಬೀಸಿದ್ದಾರೆ.

ಕ್ರಿಕೆಟಿಗರು ಹಾಗೂ ಅಧಿಕಾರಿಗಳು ತಮ್ಮದೇ ಭ್ರಾಂತಿಯಲ್ಲಿ ಬದುಕುವುದಲ್ಲ. ಹೊರಗೆ ಏನೇ ನಡೆಯುತ್ತಿದ್ದರೂ ಅದಕ್ಕೆ ಕುರುಡು ಅಥವಾ ಕಿವುಡಾಗಿ ಇರುವಂತಿಲ್ಲ. ನೀವು ಐಪಿಎಲ್ ಆಡುತ್ತಿರುವಾಗ ಸ್ಟೇಡಿಯಂ ಹೊರಗೆ ಆ್ಯಂಬುಲೆನ್ ಗಳು ಓಡಾಡುತ್ತಿವೆ ಎನ್ನುವ ಅರಿವೂ ನಿಮಗಿರಲಿ. ಆದ್ದರಿಂದ ಸಂಭ್ರಮಾಚಣೆ ಕನಿಷ್ಠವಾಗಿರಲಿ. ಏಕೆಂದರೆ ನೀವು ಸಮಾಜದ ಬಗೆಗೂ ಕನಿಷ್ಠ ಗೌರವ ಹೊಂದಿರಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ರದ್ದುಗೊಳಿಸಲು ಅಖ್ತರ್ ಮನವಿ

ಭಾರತದಲ್ಲಿ ಕೊರೋನ ಎರಡನೇ ಅಲೆ ಮಾರಣಾಂತಿಕವಾಗಿ ವ್ಯಾಪಿಸಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಐಪಿಎಲ್ ಆಯೋಜನೆ ಮಾಡುವುದು ಸರಿಯಲ್ಲ, ಅದನ್ನ ರದ್ದುಗೊಳಿಸಿ ಆ ದುಡ್ಡನ್ನು ಆಮ್ಲಜನಕ ಸಿಲಿಂಡರ್ ಖರೀದಿಸಲು ನೀಡುವಂತೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಮನವಿ ಮಾಡಿದ್ದಾರೆ.

ಐಪಿಎಲ್ ವರದಿ ಮಾಡಲ್ಲ ಎಂದ ‘ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’

"ಭಾರತವು ಅತೀ ಕಠಿಣವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಾವಿರಾರು ಅವರ ಜೀವಿಸುವ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಈ ವೈರಸ್ ನ ಸವಾಲನ್ನು ಎದುರಿಸುವಲ್ಲಿ ಆರೋಗ್ಯ ವ್ಯವಸ್ಥೆಗಳು ವಿಫಲವಾಗುತ್ತಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ದೇಶವು ಇಂತಹ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಡೆಯುತ್ತಿರುವ ಐಪಿಎಲ್ ನ ವರದಿಗಳನ್ನು ನಾವು ಪ್ರಕಟಿಸುವುದಿಲ್ಲ. ನಮಗೆ ಐಪಿಎಲ್ ನೊಂದಿಗೆ ತೊಂದರೆಯಿಲ್ಲ. ಆದರೆ ಅದನ್ನು ಸಂಘಟಿಸುತ್ತಿರುವ ಸಮಯದ ಬಗ್ಗೆ ಆಕ್ಷೇಪವಿದೆ " ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ತನ್ನ ಮುಖಪುಟದಲ್ಲಿ ಪ್ರಕಟಿಸಿದೆ.

ಆಕ್ಸಿಜನ್ ಗೆ ಪರದಾಟ, ಮುಂದುವರಿದ ಆಟ

ಕೋವಿಡ್ ಆರ್ಭಟಿಸುತ್ತಿರುವ ಮಧ್ಯೆ ದೇಶದಲ್ಲಿ ಈಗ ಕೋವಿಡ್ ಸೋಂಕಿತರು ಬೆಡ್, ಆಕ್ಸಿಜನ್ ಇಲ್ಲದೆ ಪರದಾಡುತ್ತಿರುವ ಘಟನೆಗಳು ಅಲ್ಲಲ್ಲಿ ಕಂಡುಬರುತ್ತಿವೆ. ಮೃತದೇಹಗಳನ್ನು ಅಂತ್ಯಕ್ರಿಯೆ ನಡೆಸಲು ಚಿತಾಗಾರದ ಬಳಿ ಕ್ಯೂ ನಿಲ್ಲುವ ಸನ್ನಿವೇಶಗಳೂ ವರದಿಯಾಗುತ್ತಿವೆ. ಬೀದಿಗಳಲ್ಲಿ ಶವಗಳು ಬಿದ್ದಿರುವ ದೃಶ್ಯಗಳೂ ಕಂಡು ಬರುತ್ತಿದೆ. ಆದರೆ ಇದ್ಯಾವುದರ ಪರಿವೆಯೇ ಇಲ್ಲದಂತೆ ಐಪಿಎಲ್ ನಡೆಯುತ್ತಿರುವುದು ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ಕೆಲ ಮಾಜಿ ಆಟಗಾರರು ಸೇರಿ ಹಲವು ಮಂದಿ ಐಪಿಎಲ್ ಸ್ಥಗಿತ ಇಲ್ಲವೇ ಮುಂದೂಡಿಕೆಗೆ ಮನವಿ ಮಾಡಿದ್ದಾರೆ.

ತುಟಿ ಬಿಚ್ಚದ ಆಟಗಾರರು: ದೇಶದಲ್ಲಿ ಈಗ ಕೋವಿಡ್ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿದ್ದರೂ ಕೂಡಾ ಆಟದಲ್ಲೇ ನಿರತರಾಗಿರುವ ಕ್ರಿಕೆಟಿಗರು ಇದುವರೆಗೂ ದೇಶದ ಸಮಸ್ಯೆಯ ಬಗ್ಗೆ ತುಟಿ ಬಿಚ್ಚಿಲ್ಲ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ, ಹಲವು ವಿಷಯಗಳ ಬಗ್ಗೆ ಆಗಾಗ ಟ್ವೀಟ್ ಮಾಡುತ್ತಿದ್ದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಮುಹಮ್ಮದ್ ಕೈಫ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಸೇರಿ ಪ್ರಮುಖ ಆಟಗಾರರು ಕೋವಿಡ್ ಸಂಕಷ್ಟದ ಬಗ್ಗೆ ಯಾವುದೇ ಮಾತುಗಳನ್ನಾಡದೆ ಮೌನವಾಗಿದ್ದಾರೆ. ಬಾಕಿ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುವ ಈ ಆಟಗಾರರು ದೇಶದ ಸಂಕಷ್ಟದ ಬಗ್ಗೆ ಮಾತನಾಡದಿರುವುದು ಮಾತ್ರ ವಿಪರ್ಯಾಸ.

ದಿಲ್ಲಿ ರೈತರ ಪ್ರತಿಭಟನೆ ಬಗ್ಗೆ ವಿದೇಶಿ ಸೆಲೆಬ್ರಿಟಿಗಳು ಮಾತನಾಡಿದಾಗ ಭಾರತದ ಆಂತರಿಕ ವಿಷಯ ಎಂದು ಸಾಲು ಸಾಲು ಟ್ವೀಟ್ ಮಾಡಿದ ನಟ-ನಟಿಯರು, ಆಟಗಾರರು ಇಂದು ತಮ್ಮದೇ ದೇಶದ ಆಂತರಿಕ ಸಮಸ್ಯೆಯ ಬಗ್ಗೆಯೇ ಮೌನವಾಗಿದ್ದೇಕೆ ಎಂಬ ಪ್ರಶ್ನೆಗಳೂ ಕೇಳಿ ಬರುತ್ತಿವೆ.

ವಿದೇಶಿ ಆಟಗಾರರಿಂದ ದೇಣಿಗೆ, ಹಾರೈಕೆ

ಆಸ್ಟ್ರೇಲಿಯಾದ ಆಟಗಾರ, ಸದ್ಯ ಐಪಿಎಲ್ ನಲ್ಲಿ ಕೆಕೆಆರ್ ಪ್ರತಿನಿಧಿಸುತ್ತಿರುವ ಪ್ಯಾಟ್ ಕಮಿನ್ಸ್ ಭಾರತದ ಕೋವಿಡ್ ಸಂಕಷ್ಟಕ್ಕೆ ಮರುಗಿ 50 ಸಾವಿರ ಡಾಲರ್ ಹಣವನ್ನು ದೇಣಿಗೆಯಾಗಿ ನೀಡಿದ್ದು, ಇದರ ಬೆನ್ನಲ್ಲೇ ಮಾಜಿ ಆಟಗಾರ ಬ್ರೆಟ್ ಲೀ ಕೂಡ ಭಾರತದ ನೆರವಿಗೆ ಧಾವಿಸಿದ್ದಾರೆ.  ಮಾಜಿ ಆಟಗಾರರಾದ ಶಾಹಿದ್ ಅಫ್ರಿದಿ, ಆ್ಯಡಂ ಗಿಲ್ ಕ್ರಿಸ್ಟ್, ಪಾಕ್ ಆಟಗಾರ ಬಾಬರ್ ಅಝಂ ಸೇರಿ ಪ್ರಮುಖ ತಾರೆಗಳು ಭಾರತದ ಕೋವಿಡ್ ಸಂಕಷ್ಟ ದೂರವಾಗಲೆಂದು ಪ್ರಾರ್ಥಿಸಿದ್ದಲ್ಲದೇ, ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ.

ಒಂದೆಡೆ ಕೊರೋನದಿಂದಾಗಿ ಇದೀಗ ಇಡೀ ದೇಶ ಆಕ್ಸಿಜನ್ ಕೊರತೆಯಿಂದ ಬಳಲುತ್ತಿದೆ. ಹೆಣಗಳು ಸಾಲು ಸಾಲಾಗಿ ಮೆರವಣಿಗೆ ಹೂಡಿವೆ. ಆದರೂ ಹಣದ ಹೊಳೆ ಹರಿಯುವ ಐಪಿಎಲ್ ಯಥಾಸ್ಥಿತಿಯಲ್ಲಿ ಮುಂದುವರಿದಿರುವುದು ಹಲವರ ಆತಂಕ, ಆಕ್ರೋಶಕ್ಕೆ ಕಾರಣವಾಗಿದೆ. ದೇಶದ ಬಹುತೇಕ ಕಡೆಗಳಲ್ಲಿ ಎಲ್ಲಾ ಧಾರ್ಮಿಕ, ಶೈಕ್ಷಣಿಕ ಕೇಂದ್ರಗಳು ಬಂದ್ ಆಗಿದ್ದರೂ, ರಾಜಕೀಯ, ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದರೂ ಐಪಿಎಲ್ ನಡೆಯುತ್ತಿರುವುದು ಭೀತಿ ಹುಟ್ಟಿಸಿದೆ.

ಹಲವಾರು ಮಂದಿ ಆಕ್ಸಿಜನ್ ಇಲ್ಲದೇ ಪರದಾಡುತ್ತಿದ್ದಾರೆ. ಮೃತದೇಹಗಳನ್ನು ಸುಡಲು ಸ್ಮಶಾನಗಳು ದೊರಕದಂತಾಗಿದೆ. ಇಂತಹ ಸಮಯದಲ್ಲಿ ಐಪಿಎಲ್ ದೇಶದಲ್ಲಿ ಅನಿವಾರ್ಯವೇ ಎಂಬ ಪ್ರಶ್ನೆ ಎಲ್ಲರಲ್ಲೂ ಉದ್ಭವಿಸಿದೆ. ಆದರೆ ಬಿಸಿಸಿಐ ಮಾತ್ರ ಐಪಿಎಲ್ ಸ್ಥಗಿತಗೊಳಿಸಲು ಹಿಂದೇಟು ಹಾಕಿದ್ದು, ಟೂರ್ನಿ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

Writer - ನಾಸಿರ್ ಸಜಿಪ

contributor

Editor - ನಾಸಿರ್ ಸಜಿಪ

contributor

Similar News