ಮಂಗಳೂರು: ಅತ್ತ ಕೆಲಸವಿಲ್ಲ...ಇತ್ತ ಅನ್ನವಿಲ್ಲ...ರಸ್ತೆ ಬದಿಯ ಕೊಳೆತ ಹಣ್ಣು, ತರಕಾರಿ ತಿಂದು ಬದುಕುವ ಕಾರ್ಮಿಕರು

Update: 2021-04-28 13:29 GMT

ಮಂಗಳೂರು, ಎ.28: ಕೊರೋನ ಸೋಂಕು ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ ಲಾಕ್‌ಡೌನ್-ಕರ್ಫ್ಯೂ ಘೋಷಿಸಿದ ಹಿನ್ನಲೆಯಲ್ಲಿ ವಲಸೆ ಕಾರ್ಮಿಕರು ಅದೆಂತಹ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದಕ್ಕೆ ಮಂಗಳೂರಿನಲ್ಲಿ ಬುಧವಾರ ಕಂಡು ಬಂದ ದೃಶ್ಯ ಸಾಕ್ಷಿಯಾಗಿದೆ.

ನಗರದ ಸೆಂಟ್ರಲ್ ಮಾರ್ಕೆಟ್ ಪರಿಸರದಲ್ಲಿ ಕೇರಳ ಮೂಲದ ಕಾರ್ಮಿಕರೊಬ್ಬರು ರಸ್ತೆಬದಿಯಲ್ಲಿ ಎಸೆಯಲಾದ ಕೊಳೆತ ತರಕಾರಿ ರಾಶಿಯಿಂದ ಟೊಮಟೊ ಇತ್ಯಾದಿಯನ್ನು ಹೆಕ್ಕಿ ಶುಚಿಗೊಳಿಸಿ ಅವುಗಳನ್ನು ತಿನ್ನಲು ಮುಂದಾದರು. ಅವರಂತೆಯೇ ಇನ್ನೂ ಕೆಲವರು ತ್ಯಾಜ್ಯದ ರಾಶಿಗೆ ಕೈ ಹಾಕುತ್ತಿದ್ದುದು ಕಂಡು ಬಂತು.

‘ನಾನು ಕೇರಳಿಗ. ಪತ್ನಿ ಮಕ್ಕಳು ಊರಲ್ಲಿದ್ದಾರೆ. ಇಲ್ಲೇ ಕೆಲವು ವರ್ಷದಿಂದ ಏನಾದರೊಂದು ಕೆಲಸ ಮಾಡಿಕೊಂಡು ಬದುಕುತ್ತಿದ್ದೆ. ಇದೀಗ ಇಲ್ಲಿನ ಸರಕಾರ ಕೊರೋನ ತಡೆಯಲು ಲಾಕ್‌ಡೌನ್ ಹೇರಿದೆಯಂತೆ. ಇದರಿಂದ ನಮಗೆ ಕೆಲಸವಿಲ್ಲ, ಕೆಲಸ ಇಲ್ಲದ ಕಾರಣ ಊಟವೂ ಇಲ್ಲ. ತಿನ್ನಲಿಕ್ಕೆ ಏನೂ ಇಲ್ಲದಿದ್ದರೆ ಮತ್ತೇನು ಮಾಡುವುದು? ಹೀಗೆ ರಸ್ತೆ ಬದಿಯ ಕೊಳೆತ ಹಣ್ಣು ಹಂಪಲು, ತರಕಾರಿ ತಿಂದು ಬದುಕುವಂತಾಗಿದೆ’ ಎಂದರು.

ಕೊರೋನದಿಂದ ಯಾರೂ ಸಾಯುವುದಿಲ್ಲ, ಊಟ ಇಲ್ಲದೆ ಸಾಯುತ್ತಾರೆ. ಅದು ಸರಕಾರಕ್ಕೆ ಅರ್ಥ ಆಗಬೇಕು. ನಾವು ಕೆಲಸ ಮಾಡಿಯೇ ಬದುಕುವವರು. ಕೆಲಸ ಸಿಗದಿದ್ದರೆ ನಾವೇನು ಮಾಡಲಿ?. ಕೊಳೆತ ತರಕಾರಿ, ಹಣ್ಣು ಹಂಪಲು ತಿಂದೋ, ನೀರು ಕುಡಿದೋ ಬದುಕುವ ಸ್ಥಿತಿ ನಮ್ಮದಾಗಿದೆ. ಸರಕಾರಕ್ಕೆ ನಮ್ಮ ಪರಿಸ್ಥಿತಿ ಅರ್ಥವಾಗುವುದಿಲ್ಲ. ಇಲ್ಲಿ ನಾನು ಮಾತ್ರ ಅಲ್ಲ, ನನ್ನಂತಹ ನೂರಾರು ಮಂದಿ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ನಮ್ಮನ್ನು ಇಲ್ಲಿ ಕೇಳುವವರು ಯಾರೂ ಇಲ್ಲ. ಒಬ್ಬೊಬ್ಬರದ್ದು ಒಂದೊಂದು ಕಥೆ. ಅದನ್ನು ಕೇಳಿಸಿಕೊಳ್ಳಲು ಸರಕಾರಕ್ಕೆ ಮನಸ್ಸಿಲ್ಲ ಎಂದು ಕೇರಳದ ಈ ವ್ಯಕ್ತಿ ಅಳಲು ತೋಡಿಕೊಂಡರು.

"ಕೈ-ಕಾಲಲ್ಲಿ ಬಲವಿಲ್ಲ- ಆದರೂ ದುಡಿದು ತಿನ್ನುತ್ತಿದ್ದೆ..."
ಮೂರು ವರ್ಷದ ಹಿಂದೆ ನಡೆದ ಅಪಘಾತದಲ್ಲಿ ನನ್ನ ಕೈ ಮತ್ತು ಕಾಲಿಗೆ ಗಾಯವಾಗಿ ಬಲವಿಲ್ಲವಾಗಿದೆ. ದುಡಿದ 80 ಸಾವಿರ ರೂಪಾಯಿ ನನ್ನ ಚಿಕಿತ್ಸೆಗೆ ವ್ಯಯಿಸಿದೆ. ಬಳಿಕ ಏನಾದರು ಕೆಲಸ ಮಾಡಿ ದುಡಿದು ತಿನ್ನುತ್ತಿದ್ದೆ. ಈ ಲಾಕ್‌ಡೌನ್‌ನಿಂದಾಗಿ ಕೆಲಸ ಇಲ್ಲವಾಗಿದೆ. ಸರಕಾರ ಲಾಕ್‌ಡೌನ್ ಮಾಡಿದ್ದರಿಂದ ನಮ್ಮಂತಹವರಿಗೆ ತುಂಬಾ ಕಷ್ಟವಾಗಿದೆ. ನಮ್ಮ ನೋವನ್ನು ಯಾರಲ್ಲಿ ಹೇಳಿಕೊಳ್ಳುವುದು? ನಾನು ಮೂಲತಃ ಮೂಡುಬಿದಿರೆಯವ. ಮಂಗಳೂರಿನಲ್ಲೇ ದುಡಿದು ತಿನ್ನುತ್ತಿದ್ದೆ. ಈಗ ಅದೂ ಇಲ್ಲವಾಗಿದೆ. ಕೇರಳಕ್ಕೆ ಕೆಲಸ ಹುಡುಕಿಕೊಂಡು ಕೆಲವರು ಇಲ್ಲಿಂದ ಹೊರಡುವ ವಿಷಯ ಗೊತ್ತಾಯಿತು. ಹಾಗಾಗಿ ಬಂದರ್ ದಕ್ಕೆಗೆ ಹೋಗಿ 10 ರೂ. ಕೊಟ್ಟು ಸ್ನಾನ ಮಾಡಿ ಬಟ್ಟೆ ಒಗೆದು ಬಂದೆ. ಇನ್ನೀಗ ರೈಲು ಮೂಲಕ ಕೇರಳಕ್ಕೆ ತೆರಳಿ ಏನಾದರೊಂದು ಕೆಲಸ ಮಾಡಿ ಬದುಕುವ ನಿರ್ಧಾರ ಮಾಡಿರುವೆ’ ಎಂದು ಇನ್ನೊಬ್ಬ ಕೆಲಸಗಾರ ತನ್ನ ಸಂಕಷ್ಟವನ್ನು ಬಿಚ್ಚಿಟ್ಟರು.

ಒಟ್ಟಿನಲ್ಲಿ ‘ಕೊರೋನ-ಲಾಕ್‌ಡೌನ್-ಕರ್ಫ್ಯೂ’ ಸಂಕಷ್ಟಕ್ಕೆ ಬಡಪಾಯಿಗಳು ಸಿಲುಕುತ್ತಲೇ ಇದ್ದಾರೆ. ನಗರದಲ್ಲಿ ಇಂತಹ ನೂರಾರು ಮಂದಿ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಭರವಸೆಗಳು ಕರಗಿಹೋಗುತ್ತಿವೆ ಎಂಬ ಮಾತು ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News