ಅಡ್ಡೂರು: ಉಚಿತ ಆಕ್ಸಿಜನ್ ಸಿಲಿಂಡರ್ ಸೇವೆ

Update: 2021-04-29 14:00 GMT

ಗುರುಪುರ, ಎ.29: ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರು ಗ್ರಾಮದ ಅಡ್ಡೂರು ಜಂಕ್ಷನ್‌ನಲ್ಲಿ ತಿಂಗಳ ಹಿಂದೆ ಸ್ಥಾಪನೆಯಾಗಿರುವ ಸೇವಾ ಸಿಂಧು ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ 'ಪ್ರಿಯದರ್ಶಿನಿ ಹೆಲ್ಪ್‌ಲೈನ್'ನಲ್ಲಿ ಕಳೆದ ಐದು ದಿನಗಳಿಂದ ಆಮ್ಲಜನಕ (ಆಕ್ಸಿಜನ್) ಕೊರತೆಯಿರುವವರಿಗೆ ನೆರವಾಗಲೆಂದು ಉಚಿತ ಆಕ್ಸಿಜನ್ ಪೂರೈಕೆ ಸೇವೆ ಆರಂಭಿಸಿದೆ.

ಆಕ್ಸಿಜನ್ ಅಗತ್ಯವಿರುವ ಆಸುಪಾಸಿನ ಮಂದಿ ಇದರ ಪ್ರಯೋಜನ ಪಡೆಯಬಹುದು. ಕೇಂದ್ರದಲ್ಲಿ ಈಗ ಐದು ಸಿಲಿಂಡರ್ ಇಟ್ಟುಕೊಳ್ಳಲಾಗಿದೆ. ಗುರುಪುರ ಕೈಕಂಬ ಮನೆಗೆ ಈಗಾಗಲೇ ಒಂದು ಸಿಲಿಂಡರ್ ರವಾನಿಸಲಾಗಿ ಉಚಿತವಾಗಿ ಫಿಲ್ಲಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಸೌಖ್ಯದಲ್ಲಿರುವವರಿಗೆ ಒಂದಕ್ಕಿಂತ ಹೆಚ್ಚು ಸಿಲಿಂಡರ್ ಉಚಿತವಾಗಿ ನೀಡಲಾಗುತ್ತಿದೆ.

ಕಳೆದ ಬಾರಿ ಕೊರೋನಾ ಮಹಾಮಾರಿ ಬಾಧಿಸಿದಾಗ ಅಡ್ಡೂರಿನ ಜುಮ್ಮಾ ಮಸೀದಿ ಆಡಳಿತವು ಐದು ಆಕ್ಸೀಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ್ದು, ಅಗತ್ಯವಿದ್ದ ಸ್ಥಳೀಯ ಹಾಗೂ ದೂರದ ಪ್ರದೇಶದ ಜನರಿಗೆ ಮಸೀದಿ ವತಿಯಿಂದ ಉಚಿತವಾಗಿ ಒದಗಿಸಲಾಗಿತ್ತು. ಈ ಬಾರಿಯೂ ಈ ಸೇವೆ ಮುಂದುವರಿದಿದೆ. ಮಾಹಿತಿಗೆ ಮೊ.ಸಂ: 9741413767/8792247746ನ್ನು ಸಂಪರ್ಕಿಸಬಹುದು.

'ಈ ಬಾರಿ ಗುರುಪುರ-ಅಡ್ಡೂರು ವಲಯ ಯುವ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸಮಿತಿಯ ವತಿಯಿಂದ ಪ್ರಿಯದರ್ಶಿನಿ ಹೆಲ್ಪ್‌ಲೈನ್‌ನಲ್ಲಿ ಐದು ಆಕ್ಸೀಜನ್ ಸಿಲಿಂಡರ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ದಾನಿಗಳ ನೆರವು ಪಡೆಯಲಾಗಿದೆ. ಕಾಂಗ್ರೆಸ್ ವತಿಯಿಂದ ಸ್ಥಳೀಯವಾಗಿ ಕೊರೋನ ರೋಗಿಗಳಿಗೆ ವೈದ್ಯರ ಸಲಹೆ ಮತ್ತು ಉಚಿತ ಔಷಧಿ ಪೂರೈಕೆಗಾಗಿ ಯುವಕರ ವಿಶೇಷ ತಂಡ ರಚಿಸಲಾಗಿದೆ. ಈ ತಂಡವು ಅಹೋರಾತ್ರಿ ಸೇವೆಗೆ ಧಾವಿಸಲಿದೆ. ಸಿಲಿಂಡರ್ ಸಾಗಾಟ ಮತ್ತು ಫಿಲ್ಲಿಂಗ್ ಸಂಪೂರ್ಣ ಉಚಿತವಾಗಿದೆ. ಗುರುಪುರ ಗ್ರಾಪಂ ವ್ಯಾಪ್ತಿಯ ಅರ್ಹರು ಇದರ ಸಹಾಯ ಪಡೆಯಬಹುದು. ದೂರದ ಊರಿನ ಮಂದಿಗೂ ಇದು ಲಭ್ಯವಿದೆ' ಎಂದು ಹೆಲ್ಪ್‌ಲೈನ್‌ನ ರೂವಾರಿಗಳಾದ ದ.ಕ.ಜಿಪಂ ಮಾಜಿ ಸದಸ್ಯ ಯುಪಿ ಇಬ್ರಾಹಿಂ ಹಾಗೂ ಗುರುಪುರ ಗ್ರಾಪಂ ಸದಸ್ಯ ಎ.ಕೆ. ಅಶ್ರಫ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News