ತಂದೆಗಾಗಿ ಯುವಕ ಖರೀದಿಸಿದ ಆಮ್ಲಜನಕ ಕಾನ್ಸನ್ ಟ್ರೇಟರ್ ಅನ್ನು ಹೊಟೇಲ್ ಗೆ ಸಾಗಿಸಿದ ಐಪಿಎಲ್ ತಂಡ!

Update: 2021-05-01 08:03 GMT

ಹೊಸದಿಲ್ಲಿ: ಈ ದಿನದಲ್ಲಿ  ಆಮ್ಲಜನಕವು ಅಮೂಲ್ಯ ಸರಕಾಗಿ ಮಾರ್ಪಟ್ಟಿದೆ. ಆಕ್ಸಿಜನ್ ಗಿಟ್ಟಿಸಿಕೊಳ್ಳುವುದು ಭಾರೀ ಕಷ್ಟವಾಗಿದೆ. ಅನ್ವರ್ ಅವರು ತನ್ನ ತಂದೆಯ ಎಸ್ ಪಿ ಒ 2 ಮಟ್ಟ ಕುಸಿಯುತ್ತಿರುವುದನ್ನು ನೋಡಿ ಆಮ್ಲಜನಕ ಸಿಲಿಂಡರ್ ಗಳನ್ನು ಹುಡುಕುವ ಬದಲು ಆಮ್ಲಜನಕ ಸಾಂದ್ರತೆಯನ್ನು (ಆಕ್ಸಿಜನ್ ಕಾನ್ಸನ್ ಟ್ರೇಟರ್)ಖರೀದಿಸಲು ನಿರ್ಧರಿಸಿದರು. ಆಮ್ಲಜನಕ ಸಾಂದ್ರತೆಯನ್ನು ಖುದ್ದಾಗಿ ಎಪ್ರಿಲ್ 26ರಂದು ಬೆಂಗಳೂರಿನಿಂದ ದಿಲ್ಲಿ ವಿಮಾನ ನಿಲ್ದಾಣಕ್ಕೆ ಸಾಗಿಸಿದರು.

ಆದರೆ ಅವರು ದಿಲ್ಲಿ ವಿಮಾನ ನಿಲ್ದಾಣದ ಟಿ3 ಟರ್ಮಿನಲ್ ಗೆ ಇಳಿದು ಸಾಮಾನ್ಯ ಬ್ಯಾಗೇಜ್ ಕ್ಲೈಮ್ ಬಳಿ ಹೋದಾಗ ಆಮ್ಲಜನಕ ಸಾಂದ್ರತೆ ಹೊಂದಿರುವ ಪೆಟ್ಟಿಗೆ ಸಿಗಲಿಲ್ಲ. ಈ ಕುರಿತು ಅವರು ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ವಿಚಾರಿಸಿದಾಗ, ಪೆಟ್ಟಿಗೆಗಳು ಸಾಮಾನ್ಯವಾಗಿ ಸಾಮಾನ್ಯ ಬೆಲ್ಟ್ ಗೆ ಹೋಗುತ್ತವೆ. ಅದು ಪ್ರಯಾಣಿಕರಿಗೆ ತಮ್ಮ ಲಗೇಜ್ ಗಳನ್ನು ಸಂಗ್ರಹಿಸಲು ನಿಗದಿಪಡಿಸಿದ ಬೆಲ್ಟ್ ಗಿಂತ ಭಿನ್ನವಾಗಿರುತ್ತದೆ. ಈ ಬೆಲ್ಟ್ ವಿಮಾನ ಯಾನಗಳಲ್ಲಿ ಸಾಮಾನ್ಯವಾಗಿದೆ ಎಂದು ಅವರಿಗೆ ತಿಳಿಸಲಾಯಿತು.
ಆದರೆ 3 ಗಂಟೆಗಳ ನಂತರ ರಾತ್ರಿ 9:30ರ ವರೆಗೂ ಪೆಟ್ಟಿಗೆ ಪತ್ತೆಯಾಗಿಲ್ಲ. 

ಪ್ರಯಾಣಿಕರ ವಿಭಾಗಕ್ಕಿಂತ ಭಿನ್ನವಾಗಿರುವ ಸರಕು(ಕಾರ್ಗೊ)ವಿಭಾಗಕ್ಕೆ ಪೆಟ್ಟಿಗೆ ಹೋಗಿರಬಹುದು ಎಂದು ಸಿಬ್ಬಂದಿ ನನಗೆ ಮಾಹಿತಿ ನೀಡಿದರು. ನಾವು ಅಲ್ಲಿಗೆ ಹೋಗುವುದಿಲ್ಲ. ಯಾರನ್ನಾದರೂ ಪರೀಕ್ಷಿಸಲು ಕಳುಹಿಸುತ್ತೇವೆ ಎಂದು ನನಗೆ ತಿಳಿಸಿದರು ಎಂದು ಅನ್ವರ್ ಹೇಳಿದರು.

ಪೆಟ್ಟಿಗೆ ಎಲ್ಲಿಗೆ ಹೋಯಿತ್ತೆಂದು ಕಂಡುಹಿಡಿಯಲು ಅನ್ವರ್ ಅನೇಕ ಜನರನ್ನು ಸಂಪರ್ಕಿಸಿದರು.

ವಿಮಾನಯಾನ ಸಂಸ್ಥೆಯು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅನ್ವರ್ ಅವರು ಇಂಡಿಗೊ ವಿಮಾನದಲ್ಲಿ ಇಳಿದ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ವಿಸ್ಟಾರಾ ಏರ್ ಲೈನ್ಸ್ ನಲ್ಲಿ ಬಂದಿಳಿದಿರುವುದು ಕಂಡುಬಂದಿದೆ.   

ಚೆನ್ನೈ ತಂಡದ ಸದಸ್ಯರೊಬ್ಬರು ಚೆನ್ನೈ ತಂಡದ ಲಗೇಜ್ ಎಂದು ಭಾವಿಸಿ ಅಚಾತುರ್ಯದಿಂದ ಆಮ್ಲಜನಕ ಸಾಂದ್ರತೆಯನ್ನು ಒಯ್ದಿದ್ದಾರೆ. ಚೆನ್ನೈ ತಂಡ ಎ.28ರಂದು ದಿಲ್ಲಿಯಲ್ಲಿ ಐಪಿಎಲ್ ಆಡಲು ಬಂದಿತ್ತು.

ಆಟಗಾರರ ವೈಯಕ್ತಿಕ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಲಗೇಜ್ ಗಳನ್ನು ವಿಮಾನ ನಿಲ್ದಾಣದಿಂದ ತೆಗೆದುಕೊಂಡು ಹೊಟೇಲ್ ನಲ್ಲಿ ಒಂದು ದಿನ ಪ್ರತ್ಯೇಕ ಕೋಣೆಯಲ್ಲಿ ಇಡಲಾಗುತ್ತದೆ. ಅಲ್ಲಿ ಅದನ್ನು ಸ್ವಚ್ಛಗೊಳಿಸಲಾಗುತ್ತದೆ. ಚೆನ್ನೈ ತಂಡದೊಂದಿಗೆ ಲಗೇಜ್ ನೊಂದಿಗೆ ಆಮ್ಲಜನಕ ಸಾಂದ್ರತೆಯನ್ನು ತೆಗೆದುಕೊಂಡು ಹೋಗಲಾಗಿತ್ತು.

ಎಪ್ರಿಲ್ 27 ರಾತ್ರಿ ಹೊತ್ತಿಗೆ ಸಿಎಸ್‍ಕೆ ತಮ್ಮ ಬಳಿ ಹೆಚ್ಚುವರಿ ಸಾಮಾನು ಸರಂಜಾಮು ಇದೆ ಎಂದು ಹೇಳಿತ್ತು. ಈ ಕುರಿತು ವಿಮಾನ ನಿಲ್ದಾಣದ ವ್ಯವಸ್ಥಾಪಕರಿಗೆ ಮಾಹಿತಿ ನೀಡಿತ್ತು. ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದ ಬಳಿಕ ಸಿಎಸ್ ಕೆ ತಂಡವು ಲಗೇಜ್ ನ್ನು ತೆಗೆದುಕೊಂಡಿದೆ ಎನ್ನುವುದನ್ನು ಇಂಡಿಗೊ ಖಚಿತಪಡಿಸಿಕೊಂಡಿತ್ತು.

ಕೊನೆಗೂ 36 ಗಂಟೆಗಳ ಬಳಿಕ ಎಪ್ರಿಲ್ 28ರಂದು ಅನ್ವರ್ ಅವರು ದಿಲ್ಲಿಯಲ್ಲಿ ತಮ್ಮ ಸಿಲಿಂಡರ್ ಸಾಂದ್ರತೆಯನ್ನು ಪಡೆದುಕೊಂಡರು. ಇಂಡಿಗೊ ಸಿಬ್ಬಂದಿ ಚೆನ್ನೈ ತಂಡವಿದ್ದ ಹೊಟೇಲ್ ಗೆ ತೆರಳಿ ಸಿಲಿಂಡರ್ ಅನ್ನು ತೆಗೆದುಕೊಂಡು ಬಂದಿತ್ತು ಎಂದು henewsminute.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News